-->
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ - ಎಫ್ ಬಿಯಲ್ಲಿ ಪ್ರತಿಕ್ರಿಯೆ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ - ಎಫ್ ಬಿಯಲ್ಲಿ ಪ್ರತಿಕ್ರಿಯೆ




ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ದೇರಣ್ಣಗೌಡ ಎಂಬವರು ನಿರ್ಮಿಸುತ್ತಿರುವ ಮನೆಯನ್ನು ಅರಣ್ಯಾಧಿಕಾರಿಗಳು ತೆರವಿಗೆ ಯತ್ನಿಸಿದ ವೇಳೆ ಜಟಾಪಟಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜಾ ಹಾಗೂ ಅವರ ತಂಡದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ನೀಡಿರುವ ದೂರಿನನ್ವಯ ಈ ಎಫ್ಐಅರ್ ದಾಖಲಾಗಿದೆ. ಅ.9ರಂದು ಅರಣ್ಯಾಧಿಕಾರಿಗಳು ನಿರ್ಮಾಣ ಹಂತದಲ್ಲಿದ್ದ ದೇರಣ್ಣಗೌಡರ ಮನೆಯನ್ನು ತೆರವು ಮಾಡುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಮತ್ತಿತರ ಬಿಜೆಪಿ ಮುಖಂಡರು ಅರಣ್ಯಾಧಿಕಾರಿಗಳಲ್ಲಿ ಖ್ಯಾತೆ ತೆಗೆದಿದ್ದರು. ಈ ವೇಳೆ ಹರೀಶ್ ಪೂಂಜಾ ಹಾಗೂ ಅರಣ್ಯಾಧಿಕಾರಿಗಳ ನಡುವೆ ಭಾರೀ ಜಟಾಪಟಿ ನಡೆದು, ಅರಣ್ಯಾಧಿಕಾರಿ ಜಯಪ್ರಕಾಶ್ ಗೆ ಶಾಸಕ ಹರೀಶ್ ಪೂಂಜಾ 'ಲೋಫರ್ ನನ್ ಮಗ' ಎಂದು ಬೈದಿದ್ದರು. 

ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಬೆಂಬಲಿಗರ ವಿರುದ್ಧ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ದೂರಿನ ನೀಡಿದ್ದರು. ಆದ್ದರಿಂದ ಐಪಿಸಿ 1860(U/S-143, 353, 504, 149) ನಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


*ತನ್ನ ವಿರುದ್ಧದ ಎಫ್ಐಆರ್ ಗೆ ಹರೀಶ್ ಪೂಂಜಾ ಫೇಸ್ಬುಕ್ ಪೋಸ್ಟ್ ನಲ್ಲಿ ಪ್ರತಿಕ್ರಿಯೆ*


ತನ್ನ ವಿರುದ್ಧದ ಎಫ್ಐಆರ್ ಶಾಸಕ ಹರೀಶ್ ಪೂಂಜಾ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು‌, ನೋಡೇ ಬಿಡೋಣ, ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ. ಆದ್ದರಿಂದ ಅವರ ರಕ್ಷಣೆಗೆ ನಾನು ಜೈಲಿಗೆ ಹೋಗಲು ಸಿದ್ಧ. ಬಾಲ್ಯದಿಂದಲೂ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡಿದ್ದೇನೆ. ಎಬಿವಿಪಿ ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾದವನು. ನಾನು ಜನರಿಂದ ಶಾಸಕನಾಗಿ  ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ ಎಂದಿದ್ದಾರೆ.

ಬೆಳ್ತಂಗಡಿಯ ಅರಣ್ಯದ ಅಂಚಿನಲ್ಲಿ, ನೂರು ವರ್ಷಕ್ಕಿಂತಲೂ ಹಿಂದಿನಿಂದ ಕೃಷಿ ಮಾಡುತ್ತಾ ಬಂದಿರುವ ಕಳೆಂಜದ ಶ್ರೀ ದೇವಣ್ಣ ಗೌಡರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಶಾಸಕನಾಗಿ ಬಿಜೆಪಿ ಮಿತ್ರರೊಂದಿಗೆ ಮತ್ತು ಕಾರ್ಯಕರ್ತ ರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೇವೆ. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ?. ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ?. ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು? ಎಂದು ಪ್ರಶ್ನಿಸಿದರು.


ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್‌ ಸರ್ಕಾರದಡಿಯಲ್ಲಿ ಬದುಕುವುದು ಹೇಗೆ. ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ.‌ ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದು ಹರೀಶ್ ಪೂಂಜಾ ಬರೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article