ಮದ್ಯದ ನಶೆಯಲ್ಲಿ ಬಸ್​ ಅನ್ನು ರಿವರ್ಸ್​ ಚಲಾಯಿಸಿದ ಚಾಲಕ - ಕಿರುಚಾಡಿಕೊಂಡ ಪ್ರಯಾಣಿಕರು

ಪುಣೆ: ಮದ್ಯದ ನಶೆಯಲ್ಲಿ ಚಾಲಕ ಬಸ್​ ಅನ್ನು ರಿವರ್ಸ್​ ಚಲಾಯಿಸಿದ್ದರಿಂದ ಗಾಬರಿಗೊಂಡ ಪ್ರಯಾಣಿಕರು ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ ಘಟನೆ ರವಿವಾರ ಪುಣೆಯ ವೆಟಲ್ ಬಾಬಾ ಚೌಕ್‌ನಲ್ಲಿ ವರದಿಯಾಗಿದೆ.

ನೀಲೇಶ್ ಸಾವಂತ್ ಮದ್ಯದ ನಶೆಯಲ್ಲಿ ಬಸ್​ ಚಾಲನೆ ಮಾಡಿದ ಚಾಲಕ. 

ಮದ್ಯದ ನಶೆಯಲ್ಲಿದ್ದ ಆತ ವಾಹನವನ್ನು ರಿವರ್ಸ್ ಗೇರ್‌ನಲ್ಲಿ ಚಲಾಯಿಸಿ ಇತರ ವಾಹನಗಳಿಗೆ ಹಾನಿ ಮಾಡಿದ್ದಾನೆ. ಅಲ್ಲದೆ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಭಯಭೀತರನ್ನಾಗಿ ಮಾಡಿದ ಚಾಲಕ ಕೆಲವು ಸಮಯ ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಉಂಟು ಮಾಡಿದ್ದಾನೆ. 

50ಕ್ಕೂ ಅಧಿಕ ಮಂದಿ ಪ್ರಯಾಣಿಕರನ್ನು ಒಳಗೊಂಡ ಬಸ್​ ಅನ್ನು ಚಾಲಕ ಕುಡಿದ ನಶೆಯಲ್ಲಿ ರಿವರ್ಸ್​ ಗೇರ್​ನಲ್ಲಿ ಓಡಿಸಿದ್ದಾನೆ. ತಕ್ಷಣ ಬಸ್​ನಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರು ಚಾಲಕನಿಗೆ ಈ ರೀತಿ ಮಾಡಬೇಡಿ ಎಂದು ತಿಳಿ ಹೇಳಿದರೂ ಸಹ ಆತ ಲೆಕ್ಕಿಸದೆ ಬಸ್ ಅನ್ನು ರಿವರ್ಸ್ ಚಲಾಯಿಸಿದ್ದಾನೆ. ಘಟನೆ ತೀವ್ರವಾಗುವ ಮುನ್ನ ಕೃಷ್ಣ ಜಾಧವ್ ಎಂಬ ಯುವಕ ಬಸ್ಸಿನ ಗಾಜನ್ನು ಒಡೆದು ಚಾಲಕನನ್ನು ಬಸ್​ ನಿಲ್ಲಿಸುವಂತೆ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಎನ್‌ಸಿಪಿ ನಾಯಕಿ ಸುಪ್ರಿಯಾ ಸುಲೆ ಕೂಡ ಇದರ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಮುನ್ಸಿಪಲ್ ಕಮಿಷನರ್ ಮತ್ತು ಪುಣೆ ಪೊಲೀಸ್ ಕಮಿಷನರ್ ಅವರು ಸಂಪೂರ್ಣ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವ ಅವಶ್ಯಕತೆಯಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಬರೆದು ಟ್ವಿಟರ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.