ಅವಳದ್ದು ಸಹಜ ಸಾವಲ್ಲ: ವರ್ಷದ ಬಳಿಕ ನಟಿ ಶ್ರೀದೇವಿ ಸಾವಿನ ಕುರಿತು ಮೌನ ಮುರಿದ ಪತಿ ಬೋನಿ ಕಪೂರ್

ಮುಂಬೈ: ಭಾರತದ ಸಿನಿಮಾರಂಗದಲ್ಲಿ ದಶಕಗಳ ಕಾಲ ನಟಿಸಿ ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತಿ ಗಳಿಸಿದ್ದ ನಟಿ ಶ್ರೀದೇವಿ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಕೆಲವರು ಶ್ರೀದೇವಿ ಸಾವು ಆಕಸ್ಮಿಕ ಎಂದರೆ, ಇನ್ನೂ ಕೆಲವರು ಇದು ಅಸಹಜ ಸಾವು ಎಂದು ಶಂಕಿಸಿದ್ದರು. ತಮ್ಮ ಪತ್ನಿಯ ಸಾವಿನ ಬಗ್ಗೆ ವರ್ಷಗಳ ಕಾಲ ಮೌನ ವಹಿಸಿದ್ದ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಈಗ ಸತ್ಯವನ್ನು ಹಂಚಿಕೊಂಡಿದ್ದಾರೆ.

ನ್ಯೂ ಇಂಡಿಯನ್​ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್​ ನಟಿ ಶ್ರೀದೇವಿ ಸಾವಿನ ಕುರಿತು ಮೌನ ಮುರಿದ ಅವರು, ಆಕೆ ಕ್ರ್ಯಾಶ್​ ಡಯೆಟ್​ನಲ್ಲಿದ್ದಳು ಎಂದು ಹೇಳಿದ್ದಾರೆ. ಶ್ರೀದೇವಿಯದ್ದು ಸ್ವಾಭಾವಿಕ ಸಾವಲ್ಲ, ಇದು ಆಕಸ್ಮಿಕ ಸಾವು. ನಾನು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ. ಏಕೆಂದರೆ ನಾನು ಅದರ ಬಗ್ಗೆ ಸುಮಾರು 48 ಗಂಟೆಗಳ ಕಾಲ ಮಾತನಾಡಿದ್ದೇನೆ. ನನ್ನನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂದಿದ್ದಾರೆ. ನಾನು ಸುಳ್ಳು ಪತ್ತೆ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಶ್ರೀದೇವಿ ನಿಧನದ ಬಳಿಕ, ಬಂದ ವರದಿಯು ಅವರ ಸಾವು ಆಕಸ್ಮಿಕ ಎಂದು ಸ್ಪಷ್ಟವಾಗಿ ಹೇಳಿದೆ.

ತೆರೆಯ ಮೇಲೆ ಅಂದವಾಗಿ ಕಾಣಿಸಬೇಕೆಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ನಮ್ಮ ಮದುವೆ ಬಳಿಕ ನನಗೆ ಈ ವಿಚಾರ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆ ಇದದ್ದ ಕಾರಣ ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಈ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು ಎಂದಿದ್ದಾರೆ.

ನಟ ನಾಗಾರ್ಜುನ ಸಹ ಶ್ರೀದೇವಿ ನಿತ್ರಾಣಗೊಂಡು ಒಮ್ಮೆ ಮೂರ್ಛೆ ಹೋಗಿದ್ದನ್ನು ನನ್ನ ಬಳಿ ಹೇಳಿದ್ದರು. ಆಕೆ ನಾಗಾರ್ಜುನ ಜೊತೆ ಚಿತ್ರ ಒಂದರಲ್ಲಿ ನಟಿಸುವ ಸಮಯದಲ್ಲಿ ಆಕೆ ಕ್ರ್ಯಾಶ್​ ಡಯೆಟ್​ ಅನುಸರಿಸುತ್ತಿದ್ದಳು. ಆ ಸಮಯದಲ್ಲಿ ಆಕೆ ಬಾತ್​ರೂಮ್​ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು ಎಂದು ಬೋನಿ ಕಪೂರ್​ ಖಾಸಗಿ ಸುದ್ದಿ ವಾಹಿನಿಗೆ ನ್ಯೂ ಇಂಡಿಯನ್​ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಪತ್ನಿ ಸಾವಿನ ಕುರಿತು ಹೇಳಿದ್ದಾರೆ.