ಮಹಿಳಾ ಎಸ್ಐ ಸ್ಕೂಟರ್ ಗೆ ಬುಲೆಟ್ ನಿಂದ ಢಿಕ್ಕಿ ಹೊಡೆದು ಅವಾಝ್ ಹಾಕಿದವ ಜೈಲು ಪಾಲಾದ ಯುವಕ



ಬೆಂಗಳೂರು: ಅತೀ ವೇಗವಾಗಿ ಬೈಕ್ ಚಲಾಯಿಸದಿರಿ ಎಂದು ಬುದ್ಧಿವಾದ ಹೇಳಿದ ಪ್ರೊಬೇಷನರಿ ಮಹಿಳಾ ಸಬ್ಇನ್‌ಸ್ಪೆಕ್ಟರ್ ಸ್ಕೂಟರ್‌ಗೆ ಬುಲೆಟ್ ಬೈಕ್‌ನಿಂದ ಗುದ್ದಿ ಕೆಳಗೆ ಬೀಳಿಸಿ ಎಳೆದಾಡಿ ನಿಂದಿಸಿರುವ ಯುವಕನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆ ಮಾಳಗಾಳದ ಪಂಚಶೀಲನಗರದ ನಿವಾಸಿ ಭರತ್ ಬಂಧಿತ ಆರೋಪಿ.

ವಿಜಯನಗರದ ಸುಬ್ಬಣ್ಣ ಗಾರ್ಡನ್ ಬಳಿ ಗೋವಿಂದರಾಜನಗರ ಠಾಣೆಯ ಎಸ್‌ಐ ಅಶ್ವಿನಿ ಹಿಪ್ಪರಗಿ ಗಸ್ತಿನಲ್ಲಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಕೃತ್ಯ ಎಸಗಿ ಪರಾರಿಯಾಗಿದುವ ಭರತ್‌ನನ್ನು ಸಿಸಿ ಕ್ಯಾಮರಾ ಆಧರಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಬ್ಬಣ್ಣ ಗಾರ್ಡನ್ ಎಸ್‌ಬಿಐ ಬ್ಯಾಂಕ್ ರಸ್ತೆಯಲ್ಲಿ ಅ.15ರ ಬೆಳಗ್ಗೆ 8.30ರ ವೇಳೆಗೆ ಎಸ್‌ಐ ಅಶ್ವಿನಿ ಹಿಪ್ಪರಗಿ ಗಸ್ತಿನಲ್ಲಿದ್ದರು. ಆಗ ಅತಿವೇಗವಾಗಿ ರಾಯಲ್ ಎನ್‌ಫೀಲ್ಡ್ ಚಲಾಯಿಸಿಕೊಂಡು ಆರೋಪಿ ಭರತ್ ಬಂದಿದ್ದಾನೆ. ಆಗ ಆತನ ಬೈಕ್ ಅಡ್ಡಗಟ್ಟಿದ ಎಸ್‌ಐ, ವೇಗವಾಗಿ ಬೈಕ್ ಚಲಾಯಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಭರತ್, ‘ಏನೇ ನೀನು ನನಗೆ ಬುದ್ಧಿವಾದ ಹೇಳುತ್ತೀಯಾ. ಯೂನಿಫಾರ್ಮ್ ಹಾಕಿದ್ದೀಯಾ ಎಂದು ಕೊಬ್ಬಾ’ ಎಂದು ಕೂಗಾಡಿದ್ದಾನೆ. ಇದಕ್ಕೆ ಆಕ್ಷೇಪಿಸಿದ ಎಸ್‌ಐ, ಏಕವಚನದಲ್ಲಿ ಮಾತನಾಡಬೇಡ ಎಂದಿದ್ದಾರೆ. ಮತ್ತಷ್ಟು ಕೆರಳಿದ ಭರತ್, ‘ಈ ಬುದ್ಧಿವಾದಗಳನ್ನೆಲ್ಲ ನನ್ನ ಹತ್ತಿರ ಇಟ್ಟುಕೊಳ್ಳಬೇಡ. ಇದೆಲ್ಲ ನಿಮ್ಮ ಅಪ್ಪ-ಅಮ್ಮ ಮತ್ತು ನಿನ್ನ ಠಾಣೆಯಲ್ಲಿಟ್ಟಿಕೋ’ ಎಂದು ಏರು ದನಿಯಲ್ಲಿ ನಿಂದಿಸಿದ್ದಾನೆ.

ಇದರಿಂದ ಬೇಸತ್ತ ಎಸ್‌ಐ ಅಲ್ಲಿಂದ ಸ್ಕೂಟರ್‌ನಲ್ಲಿ ಮುಂದೆ ಸಾಗಿದಾಗ ಹಿಂಬಾಲಿಸಿಕೊಂಡು ಬಂದ ಭರತ್, ಅವರ ಸ್ಕೂಟರ್‌ಗೆ ಗುದ್ದಿದ್ದಾನೆ. ನಿಯಂತ್ರಣ ತಪ್ಪಿ ಸ್ಕೂಟರ್‌ನಿಂದ ಎಸ್ಐ ಕೆಳಗೆ ಬಿದ್ದಾಗ 'ತನ್ನನ್ನು ಎದುರು ಹಾಕಿಕೊಂಡರೆ ಇದೇ ಗತಿ' ಎಂದು ಧಮ್ಕಿ ಹಾಕಿ ಎಸ್‌ಐಯನ್ನು ಹಿಡಿದು ಎಳೆದಾಡಿ ಪರಾರಿಯಾಗಿದ್ದ. ಘಟನೆಯಲ್ಲಿ ಎಸ್‌ಐ ಸಮವಸ್ತ್ರ ಹರಿದಿಲ್ಲದೆ ಅವರ ಮುಖ-ಕೈ ಕಾಲುಗಳಿಗೆ ಗಾಯವಾಗಿತ್ತು. ಆದ್ದರಿಂದ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಹಿಂತಿರುಗಿ ದೂರು ನೀಡಿದ್ದರು. ಇದರ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಾಹಿತ ಭರತ್, ಕುಟುಂಬದ ಜತೆ ಪಂಚಶೀಲನಗರದಲ್ಲಿ ನೆಲೆಸಿದ್ದಾನೆ. ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.