ಒಟಿಪಿ ಕೇಳಿ ಪುತ್ತೂರಿನ ಕೂಲಿ ಕಾರ್ಮಿಕನ ಖಾತೆಗೆ ಕನ್ನ ಹಾಕಿದ ಅಪರಿಚಿತ - 1ಲಕ್ಷ ರೂ. ಖೋತಾ

ಪುತ್ತೂರು: ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತನಿಗೆ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆಯನ್ನು ತಿಳಿಸಿದ ಕೂಲಿ ಕಾರ್ಮಿಕರೊಬ್ಬರು ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ.  ಕಳೆದುಕೊಂಡ ಘಟನೆ ಪುತ್ತೂರಿನ ತಿಂಗಳಾಡಿಯಲ್ಲಿ ನಡೆದಿದೆ.

ಕೂಲಿ ಕಾರ್ಮಿಕ ವ್ಯಕ್ತಿಯ ಮೊಬೈಲ್‌ಗೆ ಸೆ.30ರಂದು ಬೆಳಗ್ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿ ನಿಮ್ಮ ಅಕೌಂಟ್ ನಂಬರ್‌ ತಕ್ಷಣವೇ ಕೆವೈಸಿ ಮಾಡಬೇಕು ಎಂದು ತಿಳಿಸಿ ಕೆಳಗೆ ಕೆನರಾ ಬ್ಯಾಂಕ್ ಎಂದು ಬರೆಯಲಾಗಿತ್ತು. ಈ ಬಗ್ಗೆ ಅವರು ಪುತ್ರನ ಬಳಿ ವಿಚಾರಿಸಿದಾಗ, ಬ್ಯಾಂಕ್‌ಗೆ ಹೋಗಿ ಅಲ್ಲಿ ಅವರು ಕೆವೈಸಿ ಮಾಡಿಕೊಡುತ್ತಾರೆ ಎಂದಿದ್ದರು.

ಮಧ್ಯಾಹ್ನ ಹೊತ್ತಿಗೆ ಕರೆ ಬಂದಿದ್ದು ಕನ್ನಡದಲ್ಲಿ ಮಾತನಾಡಿದ ಅಪರಿಚಿತನೊಬ್ಬ ಅಕೌಂಟ್ ನಂಬರ್ ಹೇಳಿದ್ದಾನೆ. ಅದು ನನ್ನ ಖಾತೆ ಸಂಖ್ಯೆ ಎಂದು ಕೂಲಿ ಕಾರ್ಮಿಕ ಉತ್ತರಿಸಿದ್ದಾರೆ. ಆಗ ತಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ ಅದನ್ನು ಹೇಳಿ ಎಂದು ಹೇಳಿದ್ದಾಗ ಕೂಲಿ ಕಾರ್ಮಿಕ ಒಟಿಪಿ ನಂಬರ್ ಹೇಳಿದ್ದಾರೆ. ತಕ್ಷಣವೇ ಅಕೌಂಟ್‌ನಲ್ಲಿದ್ದ 1 ಲಕ್ಷ ರೂ. ಖೋತಾ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು.

ಹಣ ಕಳೆದುಕೊಂಡ ವ್ಯಕ್ತಿ ಕೂಲಿ ಕಾರ್ಮಿಕನಾಗಿದ್ದು, ಅಲ್ಪಸ್ವಲ್ಪ ಕೂಡಿಟ್ಟ ಹಣದ ಜತೆಗೆ ಇತ್ತೀಚೆಗೆ ಸಾಲದ ರೂಪದಲ್ಲಿ ಪಡೆದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದರು. ಇದೀಗ ಕೂಡಿಟ್ಟ ಹಣದೊಂದಿಗೆ ಸಾಲದ ಹಣವೂ ವಂಚಕರ ಪಾಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu