ಆರ್ಥಿಕ ಸಂಕಷ್ಟ ಪುತ್ರಿಯ ವಿವಾಹ ನೆರವೇರಿಸಿ ಕೊಟ್ಟ ಫೈವ್ ಸ್ಟಾರ್ ಹೊಟೇಲ್ ನಲ್ಲಿಯೇ ನೇಣಿಗೆ ಶರಣಾದ ದಂಪತಿ
Saturday, September 9, 2023
ಕೇರಳ: ಪುತ್ರಿಯನ್ನು ಅದ್ದೂರಿಯಾಗಿ ವಿವಾಹ ಮಾಡಿಸಿರುವ ಫೈವ್ ಸ್ಟಾರ್ ಹೊಟೇಲ್‌ನಲ್ಲಿಯೇ ದಂಪತಿ ಸಾವಿಗೆ ಶರಣಾಗಿರುವ ದುರಂತ ಘಟನೆಯೊಂದು ಕೇರಳದ ತಿರುವನಂತರಪುರದಲ್ಲಿ ನಡೆದಿದೆ. ಅದ್ದೂರಿ ಮದುವೆಯಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ಈ ದಂಪತಿ, ಮಗಳ ವಿವಾಹ ನಡೆದು ಕೇವಲ ಮೂರು ತಿಂಗಳಲ್ಲೇ ಸಾವಿನ ಹಾದಿ ಹಿಡಿದಿದ್ದಾರೆ.
ಐದು ದಿನಗಳ ಹಿಂದೆ ಈ ದಂಪತಿ ಈ ಫೈವ್ ಸ್ಟಾರ್ ಹೊಟೇಲ್‌ಗೆ ಆಗಮಿಸಿದ್ದರು. ಇದೇ ಹೊಟೇಲ್‌ನಲ್ಲಿ ಮೂರು ತಿಂಗಳ ಹಿಂದೆ ದಂಪತಿ ತಮ್ಮ ಪುತ್ರಿಯ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಹೊಟೇಲ್‌ಗೆ ಆಗಮಿಸಿದ ದಂಪತಿ ಹೊರಗೆಲ್ಲೂ ಕಾಣಿಸದ ಹಿನ್ನೆಲೆಯಲ್ಲಿ ಹೊಟೇಲ್ ಸಿಬ್ಬಂದಿ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ದಂಪತಿ ನೇಣಿಗೆ ಶರಣಾಗಿದ್ದಾರೆ.
ಹೊಟೇಲ್ ರೂಮ್‌ನಲ್ಲಿ ಡೆತ್‌ನೋಟು ಸಿಕ್ಕಿದ್ದು, ಅದರಲ್ಲಿ ಉಲ್ಲೇಖಿಸಿದಂತೆ, ಪುತ್ರಿಯನ್ನು ಇದೇ ಹೊಟೇಲ್‌ನಲ್ಲಿ ಮದುವೆ ಮಾಡಿ ಕೊಡಲಾಗಿದೆ. ಸದ್ಯ ಆಕೆ ಗರ್ಭಿಣಿಯಾಗಿದ್ದಾಳೆ. ಸಂತೋಷದಿಂದ ಇರುವ ಆಕೆಗೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ತೊಂದರೆ ನೀಡಲು ಇಷ್ಟವಿಲ್ಲ. ನಮ್ಮ ಸಾವಿಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿನ ಬಳಿಕ ಈ ವಿಚಾರವಾಗಿ ನಮ್ಮ ಪುತ್ರಿಗೆ ಯಾವುದೇ ತೊಂದರೆ ನೀಡಬೇಡಿ. ಅಲ್ಲದೆ ನಮ್ಮ ಮೃತದೇಹವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಎಂದು ಡೆತ್‌ನೋಟ್‌ನಲ್ಲಿ ದಂಪತಿ ಬರೆದಿದ್ದಾರೆ.
ಹಿಂದೆ ಇವರ ಕುಟುಂಬ ಆರ್ಥಿಕವಾಗಿ ತುಂಬಾ ಸಧೃಡವಾಗಿತ್ತು. ಆದರೆ ಇತ್ತೀಚೆಗೆ ಉದ್ಯಮದಲ್ಲಿ ಹಿನ್ನಡೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಸಾವಿಗೆ ಶರಣಾದ ಸುಗಥನ್ ಮಸ್ಕತ್‌ನಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಕೆಲ ವರ್ಷಗಳ ಹಿಂದಷ್ಟೇ ಅವರು ತಾಯ್ತಾಡು ಕೇರಳಕ್ಕೆ ಬಂದಿದ್ದರು. ಬಳಿಕ ಕರಿಪುರ ಪ್ರಕೃತಿ ಗಾರ್ಡನ್‌ನಲ್ಲಿ ಮನೆಯೊಂದಕ್ಕೆ ಹೂಡಿಕೆ ಮಾಡಿದ್ದರು. ಆದರೆ ಪುತ್ರಿಯ ವಿವಾಹಕ್ಕೂ ಮೊದಲು ದಂಪತಿ ಅದನ್ನು ಮಾರಾಟ ಮಾಡಿದ್ದರು. ಆದರೆ ಅವರ ಪ್ರಾಥಮಿಕ ಹೂಡಿಕೆಯ 65 ಲಕ್ಷದಲ್ಲಿ ಕೇವಲ 35 ಲಕ್ಷವಷ್ಟೇ ಅವರಿಗೆ ಮರಳಿ ಪಡೆಯಲು ಸಾಧ್ಯವಾಗಿತ್ತು. ಇದರಿಂದ ದಂಪತಿ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿ ಖಿನ್ನತೆಗೆ ಜಾರಿಸಿತ್ತು. ಪೊಲೀಸರು ಈಗ ದಂಪತಿಯ ಆರ್ಥಿಕ ಹಿನ್ನಡೆಗೆ ಕಾರಣವಾದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.