ಮಲಗಿದ್ದ ಒಂದೇ ಕುಟುಂಬದ ಮೂವರಿಗೆ ಹಾವು ಕಡಿತ: ಇಬ್ಬರು ಸಾವು
Sunday, September 24, 2023
ಮಧ್ಯಪ್ರದೇಶ: ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರು ಹಾವಿನ ಕಡಿತಕ್ಕೊಳಗಾಗಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭಿಂಡ್‌ನಲ್ಲಿ ವರದಿಯಾಗಿದೆ.
ರಾಧಾ (34) ಮತ್ತು ಅವರ ಪುತ್ರಿ ಯೇಶಾ (12) ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಪುತ್ರ ಕೃಷ್ಣ (12) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ರಾತ್ರಿ ಊಟ ಮುಗಿಸಿ ನೆಲದ ಮೇಲೆ ಮೂವರು ಮಲಗಿದ್ದರು. ಈ ವೇಳೆ ರಾಧಾ, ಕೃಷ್ಣ ಮತ್ತು ಯೆಶಾರಿಗೆ ಹಾವು ಕಚ್ಚಿದೆ. ಕಡಿತದಿಂದ ಉಂಟಾದ ನೋವಿಗೆ ಮಕ್ಕಳು ಚೀರಾಡಿದ್ದಾರೆ. ಕುಟುಂಬದವರ ಜೀವವನ್ನು ಉಳಿಸಲು ಸ್ಥಳೀಯರು ಹಾವು ಕಡಿತಕ್ಕೆ ಇರುವ ಸಾಂಪ್ರದಾಯಿಕ ಪರಿಹಾರಗಳನ್ನು ಹುಡುಕಲು ಖಾರ್ಕಿಯಾ ಮೋತಿಪುರ ಗ್ರಾಮಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಸೂಕ್ತ ಪರಿಹಾರ ದೊರಕಿಲ್ಲ.
ಭಾನುವಾರ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ರಾಧಾ ಮತ್ತು ಯೆಶಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೃಷ್ಣನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.