ನವದೆಹಲಿ: ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ದಂಪತಿ ದೇವಾಲಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಇದ್ದು, ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು. ಶುಕ್ರವಾರ ದೆಹಲಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಾನೋರ್ವ ಹೆಮ್ಮೆಯ ಹಿಂದೂ ಎಂದು ಹೇಳಿಕೊಂಡಿದ್ದರು. ಅಲ್ಲದೇ ಭಾರತ ತನ್ನ ನೆಚ್ಚಿನ ದೇಶ ಇಲ್ಲಿಗೆ ಬಂದಿದ್ದು ನನಗೆ ಸಂತಸ ತಂದಿದೆ ಎಂದು ಹೇಳಿದ್ದರು. ಅಲ್ಲದೇ, ರಾಷ್ಟ್ರ ರಾಜಧಾನಿಯಲ್ಲಿದ್ದಾಗ ದೇವಾಲಯಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ರಿಷಿ ಸುನಕ್ ಭೇಟಿಗೆ ಮುಂಚಿತವಾಗಿ ದೇವಾಲಯದ ಸುತ್ತಲೂ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದ್ದು, ಅಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಅವಕಾಶ ಸಿಗಲಿಲ್ಲ, ಆದ್ದರಿಂದ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅದನ್ನು ಸರಿದೂಗಿಸಲು ಆಶಿಸುತ್ತೇನೆ ಎಂದು ಹೇಳಿದ್ದರು.
 
 
 
 
 
 
 
 
 
 
 
 
 
 
 
 
 
 
 
