ರಹಸ್ಯವಾಗಿ ಫೋರ್ನ್ ವೀಡಿಯೋ ವೀಕ್ಷಣೆ ಅಪರಾಧವಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
Wednesday, September 13, 2023
ಕೊಚ್ಚಿ: ಯಾರಿಗೂ ಶೇರ್ ಮಾಡದೆ ಖಾಸಗಿಯಾಗಿ ಪೋರ್ನ್ ವೀಡಿಯೋಗಳನ್ನು ವೀಕ್ಷಿಸುವುದು ಐಪಿಸಿ ಸೆಕ್ಷನ್ 292ರಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ತನ್ನ ಮೊಬೈಲ್ನಲ್ಲಿ ಫೋರ್ನ್ ವೀಡಿಯೋ ವೀಕ್ಷಣೆ ಮಾಡಿದ್ದ ಎಂದು ಕೇರಳ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧಿತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಅನ್ನು ರದ್ದು ಮಾಡಿ, ಖಾಸಗಿಯಾಗಿ ಪೋರ್ನ್ ವಿಡಿಯೋ ನೋಡುವುದು ಅಪರಾಧವಲ್ಲ ಎಂಬ ತೀರ್ಪು ಪ್ರಕಟಿಸಿದೆ.
ವ್ಯಕ್ತಿ ರಸ್ತೆ ಬದಿಯಲ್ಲಿ ನಿಂತು ತನ್ನ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ನೋಡುತ್ತಿದ್ದ. ಆದ್ದರಿಂದ ಆತನ ವಿರುದ್ಧ ಐಪಿಸಿ ಸೆಕ್ಷನ್ 292ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಕೇಸ್ ಅನ್ನು ವಜಾಗೊಳಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್, ಒಬ್ಬ ವ್ಯಕ್ತಿ ತನ್ನ ಖಾಸಗಿ ಸಮಯದಲ್ಲಿ ಫೋರ್ನ್ ವೀಡಿಯೋವನ್ನು ಇತರರಿಗೆ ಪ್ರದರ್ಶಿಸದೆ ನೋಡುವುದು ಅಪರಾಧ ಎಂದು ಘೋಷಿಸಲಾಗದು. ಇದು ನಾಗರಿಕನೊಬ್ಬನ ಖಾಸಗಿ ಆಯ್ಕೆ. ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ವ್ಯಕ್ತಿಯ ಗೌಪ್ಯತೆಯ ಧಕ್ಕೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಐಪಿಸಿ ಸೆಕ್ಷನ್ 292, ಅಶ್ಲೀಲ ಪುಸ್ತಕಗಳು, ವೀಡಿಯೋಗಳು, ವಸ್ತುಗಳ ಮಾರಾಟ, ವಿತರಣೆ ಮತ್ತು ಪ್ರದರ್ಶನಕ್ಕೆ ದಂಡ ವಿಧಿಸುತ್ತದೆ. ಯಾರಾದರೂ ಅಶ್ಲೀಲ ವಸ್ತುಗಳನ್ನು ಪ್ರಸಾರ ಮಾಡಲು, ವಿತರಿಸಲು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಯತ್ನಿಸಿದಾಗ ಮಾತ್ರ ಸೆಕ್ಷನ್ 292 ಅನ್ವಯಿಸುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಸೂಚಿಸಿದೆ.
ಇದಲ್ಲದೆ ಕೇರಳ ಹೈಕೋರ್ಟ್ ಅಶ್ಲೀಲತೆಯ ಐತಿಹಾಸಿಕ ಅಸ್ತಿತ್ವವನ್ನು ಎತ್ತಿ ತೋರಿಸಿತು. ಇದು ಶತಮಾನಗಳಿಂದ ಮಾನವ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿತು. ಇದೇ ಸಂದರ್ಭದಲ್ಲಿ ಈ ತೀರ್ಪು ಅಪ್ರಾಪ್ತ ಮಕ್ಕಳಿಗೆ ಸರಿಯಾದ ಮೇಲ್ವಿಚಾರಣೆಯಿಲ್ಲದೆ ಮೊಬೈಲ್ ಫೋನ್‌ಗಳನ್ನು ನೀಡುವುದರಿಂದ ಉಂಟಾಗುವ ಸಂಭಾವ್ಯ ಅಪಾಯಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆಯನ್ನೂ ನೀಡಿದೆ.