ಪುತ್ತೂರು: ಮನೆ ದರೋಡೆಗೈದ ಕಾಸರಗೋಡಿನ ಕುಖ್ಯಾತ ದರೋಡೆಕಾರರು ಅರೆಸ್ಟ್

ಪುತ್ತೂರು: ನಗರದ ಪಡುವನ್ನೂರು ಗ್ರಾಮದ ಕುದ್ರಾಡಿಯಲ್ಲಿ ಸೆ.6ರಂದು ನಸುಕಿನ ವೇಳೆ ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಅವರ ಮನೆಯಲ್ಲಿ ನಡೆದಿರುವ ದರೋಡೆ ಪ್ರಕರಣವನ್ನು ಭೇದಿಸಿರುವ ಪುತ್ತೂರು ಪೊಲೀಸರು ಆರು ಮಂದಿಯನ್ನು ಕುಖ್ಯಾತ ದರೋಡೆಕೋರರನ್ನು ಬಂಧಿಸಿದ್ದಾರೆ.

ಕಾಸರಗೋಡಿನ ಕುಖ್ಯಾತ ದರೋಡೆಕೋರರಾದ ಸನಾಲ್, ಕಿರಣ್, ವಸಂತ್, ಫೈಜಲ್, ಸುಧೀರ್, ಅಬ್ದುಲ್ ನಿಸಾರ್ ಬಂಧಿತ ಆರೋಪಿಗಳು. ಇವರಲ್ಲಿ ಸನಾಲ್ ಎಂಬಾತ ಕಾಸರಗೋಡು ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರ. ಈತ 15ಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿದ್ದಾನೆ. ಹಿಂದೊಮ್ಮೆ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಪ್ರಕರಣವೂ ಈತನ ಮೇಲಿದೆ. ನಾಲ್ಕು ಪ್ರಕರಣಗಳಲ್ಲಿ ಕೇರಳದ ಜೈಲಿನಲ್ಲಿ 9 ವರ್ಷಗಳ ಶಿಕ್ಷೆ ಅನುಭವಿಸಿದ್ದ. ಈತ ಇದೀಗ ಪೆರೋಲ್ ಮೇಲೆ ಹೊರಗೆ ಬಂದಿರುವಾಗಲೇ ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಲ್ಲರೂ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಕಿರಣ್ ಮತ್ತು ಫೈಜಲ್ ತಲಾ ಮೂರು ಪ್ರಕರಣ ಹೊಂದಿದ್ದಾರೆ. ಸುಧೀರ್ ಮೇಲೆ ವಿಟ್ಲ ಮತ್ತು ಪುತ್ತೂರಿನಲ್ಲಿ ಪ್ರಕರಣಗಳಿದೆ. ಕೇರಳದ ಜೈಲಿನಲ್ಲಿದ್ದ ರವಿ ಇತ್ತೀಚೆಗೆ 15 ದಿನಗಳ ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿದ್ದ. ಈ ವೇಳೆ, ದರೋಡೆ ತಂಡದ ಜೊತೆ ಸೇರಿ ಕೃತ್ಯಕ್ಕೆ ಕೈಜೋಡಿಸಿದ್ದು, ಆನಂತರ ಮತ್ತೆ ಜೈಲಿಗೆ ಹೋಗಿದ್ದಾನೆ. 

ಕುಕ್ಕಾಡಿಯ ಗುರುಪ್ರಸಾದ್ ಅವರ ಪರಿಚಯ ಹೊಂದಿದ್ದ ವಿಟ್ಲ ಪೆರುವಾಯಿ ನಿವಾಸಿ ಸುಧೀರ್, ದರೋಡೆ ತಂಡಕ್ಕೆ ಮಾಹಿತಿ ನೀಡಿ, ಅಲ್ಲಿ ಸಾಕಷ್ಟು ಬಂಗಾರ, ನಗದು ಇರಬಹುದು ಎಂದು ಹೇಳಿದ್ದಾನೆ. ಪದೇ ಪದೇ ಕೃತ್ಯದಲ್ಲಿ ತೊಡಗುತ್ತಿದ್ದುದರಿಂದ ಇವರಿಗೆ ಸಾಕ್ಷ್ಯ ನಾಶದ ಬಗ್ಗೆ ತಿಳಿದಿತ್ತು. ದರೋಡೆ ಕೃತ್ಯ ನಡೆಸಿದ ವೇಳೆ ಮೊಬೈಲ್ ಬಳಕೆ ಮಾಡಿರಲಿಲ್ಲ. ಅಲ್ಲದೆ, ಮನೆಮಂದಿಯ ಮೊಬೈಲನ್ನೂ ತೆಗೆದು ನೀರಿಗೆ ಹಾಕಿದ್ದರು. ಅಲ್ಲದೆ, ತಾವು ಬಳಸಿದ್ದ ಪರಿಕರಗಳನ್ನು ಯಾವುದನ್ನೂ ಬಿಡದೆ ಒಯ್ದಿದ್ದರು. ಎಲ್ಲರೂ ಮುಸುಕು ಹಾಕಿದ್ದರಿಂದ ಮನೆಯವರಿಗೂ ಗುರುತು ಹಚ್ಚಲು ಆಗಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸುವುದು ತುಂಬ ಸವಾಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣ ಪತ್ತೆಹಚ್ಚಿದ್ದಾರೆ.