ಪುತ್ರಿಯ ವಿವಾಹಕ್ಕೆಂದು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದ 18ಲಕ್ಷ ರೂ. ಗೆದ್ದಲು ತಿಂದು ನಾಶ


ಉತ್ತರಪ್ರದೇಶ: ಇಲ್ಲಿನ ಮೊರಾದಾಬಾದ್​ನ ಮಹಿಳೆಯೊಬ್ಬರು ತಮ್ಮ ಪುತ್ರಿಯ ವಿವಾಹಕ್ಕೆಂದು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷ ರೂ. ಗೆದ್ದಲು ತಿಂದು ನಾಶವಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಉತ್ತರಪ್ರದೇಶದ ಮಹಿಳೆಯೊಬ್ಬರು ತಮ್ಮ ಪುತ್ರಿಯ ವಿವಾಹಕ್ಕೆಂದು 2022ರ ಅಕ್ಟೋಬರ್‌ನಲ್ಲಿ ಬರೋಡಾದ ಆಶಿಯಾನಾ ಶಾಖೆಯ ಬ್ಯಾಂಕ್ ಲಾಕರ್‌ನಲ್ಲಿ ಹಣದೊಂದಿಗೆ ಕೆಲವು ಆಭರಣಗಳನ್ನು ಇಟ್ಟಿದ್ದರು. ಅವರು ಲಾಕರ್ ನಲ್ಲಿ 18 ಲಕ್ಷ ರೂ. ಹಣ ಇರಿಸಿದ್ದರು. ಇತ್ತೀಚೆಗಷ್ಟೇ ಮಹಿಳೆಯನ್ನು ಸಂಪರ್ಕಿಸಿದ ಬ್ಯಾಂಕ್​ ಸಿಬ್ಬಂದಿ ಲಾಕರ್‌ ಒಪ್ಪಂದವನ್ನು ರಿನಿವಲ್​ ಮಾಡಲು ಮತ್ತು ಕೆವೈಸಿ ಮಾಹಿತಿ ಅಪ್​ಡೇಟ್​ ಮಾಡಲು ಶಾಖೆಗೆ ಭೇಟಿ ನೀಡುವಂತೆ ತಿಳಿಸಿದ್ದಾರೆ.

ಈ ವೇಳೆ ಲಾಕರ್ ತೆರೆದು ನೋಡಿದಾಗ ತನ್ನ ಬಳಿಯಿದ್ದ ನೋಟುಗಳೆಲ್ಲ ಗೆದ್ದಲು ತಿಂದು ನಾಶವಾಗಿರುವುದನ್ನು ಕಂಡು ಆಕೆ ಬೆಚ್ಚಿಬಿದ್ದಿದ್ದಾರೆ. ಈ ವಿಚಾರವನಯ ತಕ್ಷಣ ಆಕೆ ಬ್ಯಾಂಕ್ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ. ಇದರಿಂದ ಬ್ಯಾಂಕ್‌ನಲ್ಲಿ ಆತಂಕ ಶುರುವಾಗಿದೆ. ಬ್ಯಾಂಕ್ ಆಫ್ ಬರೋಡಾ ಪ್ರಧಾನ ಕಚೇರಿಗೆ ವರದಿಯನ್ನು ಕಳುಹಿಸಿರುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

ಸಣ್ಣ ವ್ಯಾಪಾರ ಮತ್ತು ಟ್ಯೂಷನ್ ತರಗತಿಗಳನ್ನು ನಡೆಸುತ್ತಿರುವ ಅಲ್ಕಾ ಪಾಠಕ್ ಅವರು ತಮ್ಮ ಉಳಿತಾಯವನ್ನು ನಗದು ಮತ್ತು ಆಭರಣಗಳ ರೂಪದಲ್ಲಿ ಲಾಕರ್‌ನಲ್ಲಿ ಇಟ್ಟಿದ್ದರು. ಪುತ್ರಿಯ ಮದುವೆಗೆಂದು ಕೆಲವು ಬೆಲೆಬಾಳುವ ಆಭರಣಗಳ ಜತೆಗೆ ಸುಮಾರು 18 ಲಕ್ಷ ರೂ. ಲಾಕ್​​ನಲ್ಲಿ ಇಟ್ಟಿದ್ದರು.

ಬ್ಯಾಂಕ್ ಅಧಿಕಾರಿಗಳು ನನ್ನೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ಅಲ್ಕಾ ಪಾಠಕ್ ಆರೋಪಿಸಿದ್ದಾರೆ. “ಒಂದು ವೇಳೆ ನನಗೆ ಬ್ಯಾಂಕ್​ ಪ್ರತಿಕ್ರಿಯೆ ಮತ್ತು ಬೆಂಬಲವನ್ನು ನೀಡದಿದ್ದರೆ ನಾನು ಮಾಧ್ಯಮಗಳ ಸಹಾಯ ಪಡೆಯುತ್ತೇನೆ” ಎಂದು ಅವರು ಹೇಳಿದ್ದಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ತಂದಿರುವ ಇತ್ತೀಚಿನ ನಿಯಮಗಳು ಬ್ಯಾಂಕ್ ಲಾಕರ್‌ಗಳಲ್ಲಿ ಯಾವುದೇ ಹಣವನ್ನು ಸಂಗ್ರಹಿಸುವುದನ್ನು ನಿಷೇಧಿಸುತ್ತದೆ.