ಚೆನ್ನೈ: ಯುವತಿಯೊಬ್ಬಳು ನಾಲ್ಕೈದು ಯುವಕರೊಂದಿಗೆ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿದ್ದ ಸಂದರ್ಭ ಸ್ಥಳೀಯರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ.
ಯುವತಿ ಕನ್ಯಾಕುಮಾರಿಯ ಮೀನುಗಾರರ ಗ್ರಾಮ ಚಿನ್ನತೂರ ಮೂಲದವಳೆಂದು ತಿಳಿದು ಬಂದಿದೆ. ಜನವಸತಿಯಿಲ್ಲದ, ಜನ ಓಡಾಟವಿಲ್ಲದ ಇಡಪಾದ್ ಎಂಬ ಹೆಸರಿನ ಕರಾವಳಿ ಪ್ರದೇಶಕ್ಕೆ ಈ ಯುವತಿ ತನ್ನ ಗೆಳೆಯರೊಂದಿಗೆ ಒಬ್ಬಳೇ ತೆರಳಿದ್ದಳು. ಇದು ನಿಜಕ್ಕೂ ಆಘಾತಕಾರಿ ವಿಚಾರ. ನಾಲ್ಕೈದು ಯುವಕರ ನಡುವೆ ಯುವತಿಯೊಬ್ಬಳೇ ಇರುವುದನ್ನು ಆ ಪ್ರದೇಶಕ್ಕೆ ಭೇಟಿ ನೀಡಿದ ಜನರು ನೋಡಿದ್ದಾರೆ. ಈ ವೇಳೆ ಅಲ್ಲಿದ್ದವನೊಬ್ಬ ತನ್ನ ಮೊಬೈಲ್ನಲ್ಲಿ ಇದನ್ನು ವೀಡಿಯೋ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಯುವತಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾಳೆ. ಗಾಬರಿಯಿಂದ ಆ ಜಾಗದಲೆಲ್ಲ ಓಡಾಡಿ ಕೂಗಾಡಿದ್ದಾಳೆ. ಈ ವೇಳೆ ಆಕೆಯೊಂದಿಗೆ ಬಂದಿದ್ದ ಯುವಕರು ಕೂಡ ಸ್ಥಳದಲ್ಲಿದ್ದವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಯುವತಿ ಸೇರಿದಂತೆ ಆಕೆಯೊಂದಿಗಿದ್ದ ಯುವಕರೆಲ್ಲರೂ ಗಾಂಜಾ ಮತ್ತಿನಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಅದಕ್ಕೆ ಪೂರಕವಾದ ಅನೇಕ ಆಘಾತಕಾರಿ ವಸ್ತುಗಳು ಸಹ ಸ್ಥಳದಲ್ಲಿ ದೊರೆತಿವೆ.
ನಿರ್ಜನ ಪ್ರದೇಶದಲ್ಲಿ ಇಂಥದ್ದೊಂದು ಬೆಳವಣಿಗೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಯುವತಿಯೊಬ್ಬಳು ನಾಲ್ಕೈದು ಯುವಕರೊಂದಿಗೆ ನಿರ್ಜನ ಪ್ರದೇಶದಲ್ಲಿ ಇರುವುದೆಂದರೆ ನಿಜಕ್ಕೂ ಇದು ಚಿಂತಿಸಬೇಕಾದ ಸಂಗತಿ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಲ್ಲದೆ, ತಮಿಳುನಾಡು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.