ಪುಣೆ: ಪಾಠ ಮಾಡುತ್ತಿರುವ ವೇಳೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಮೇಲೆ ಕಾಲೇಜು ಪ್ರೊಫೆಸರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸಿಮ್ಬೈಯೋಸಿಸ್ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಧೋಲೆ(43) ಬಂಧಿತ ಆರೋಪಿ.
ಎಬಿವಿಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದ್ದರು. ಇದರನ್ವಯ ಆರೋಪಿ ಪ್ರೊಫೆಸರ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ತರಗತಿಯಲ್ಲಿ ಪಾಠ ಮಾಡುವ ವೇಳೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈ ವಿಡಿಯೋವನ್ನು ವಿದ್ಯಾರ್ಥಿಯೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಈ ಸಂಬಂಧ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP), ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಸದಸ್ಯರು ಪ್ರತಿಭಟನೆ ನಡೆಸಿ ಡೆಕ್ಕನ್ ಜಿಮ್ಖಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರೊಫೆಸರ್ ವಿರುದ್ಧ ಭಾರತ ದಂಡ ಸಂಹಿತೆ(IPC Section) 295ರ ಅಡಿಯಲ್ಲಿ ಬಂಧಿಸಿದ್ದಾರೆ.