ಪತಿಯ ಸಂಶಯ ಪಿಶಾಚಿತನಕ್ಕೆ ಪತ್ನಿ ಬಲಿ


ಮಂಡ್ಯ: ಸಂಶಯ ಪಿಶಾಚಿ ಪತಿಯೊಬ್ಬ ಪತ್ನಿಯ ಶೀಲದ ಬಗ್ಗೆಯೇ ಸಂಶಯಪಟ್ಟು ಆಕೆಯನ್ನು ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ನಡೆದಿದೆ.

ಮಧುಶ್ರೀ (25) ಕೊಲೆಯಾದ ಪತ್ನಿ. ಮಂಜುನಾಥ್ ಕೊಲೆಗೈದ ಪಾಪಿ ಪತಿ. 

ದಂಪತಿ ಒಂದೂವರೆ ವರ್ಷದಿಂದ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ವಾಸ್ತವ್ಯವಿದ್ದರು. ಮಂಜುನಾಥ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ವಾರದಲ್ಲಿ 2 ಬಾರಿ ಮನೆಗೆ ಬರುತ್ತಿದ್ದ. ಮಂಗಳವಾರ ಮಧ್ಯಾಹ್ನ ಮಂಜುನಾಥ್​ ಮನೆಗೆ ಬಂದಿದ್ದ. ಈ ವೇಳೆ ಮಂಜುನಾಥ್ ಪತ್ನಿ ಮಧುಶ್ರೀಯೊಂದಿಗೆ ಜಗಳ ತೆಗೆದಿದ್ದಾನೆ. ಪತ್ನಿಯ ಶೀಲವನ್ನು ಶಂಕಿಸಿ ತಾನೇ ಜಗಳ ಆರಂಭಿಸಿದ್ದ ಮಂಜುನಾಥ್​ ಕೊನೆಗೆ ಆಕೆಯನ್ನು ಕೊಂದು ಪರಾರಿಯಾಗಿದ್ದಾನೆ. ಈ ದಂಪತಿಗೆ ನಾಲ್ಕು ವರ್ಷ ಗಂಡು ಮಗುವಿದೆ. ಇದೀಗ ಮಗು ಅನಾಥವಾಗಿದೆ‌.

ಘಟನಾ ಸ್ಥಳಕ್ಕೆ ನಾಗಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.