-->

ಕಾರಿನಲ್ಲಿಯೇ ಸಾಕುನಾಯಿಯನ್ನು ಬಿಟ್ಟು ವಿಮಾನ ಏರಿದ ಮಾಲಕ - ಮುಂದೇನಾಯ್ತು ಗೊತ್ತೇ?

ಕಾರಿನಲ್ಲಿಯೇ ಸಾಕುನಾಯಿಯನ್ನು ಬಿಟ್ಟು ವಿಮಾನ ಏರಿದ ಮಾಲಕ - ಮುಂದೇನಾಯ್ತು ಗೊತ್ತೇ?

ಬೆಂಗಳೂರು: ಪ್ರಯಾಣಿಕನೊಬ್ಬ ಊರಿಗೆ ಹೊರಡುವ ತರಾತುರಿಯಲ್ಲಿ ಪಾರ್ಕಿಂಗ್​ ಪ್ರದೇಶದಲ್ಲಿ ಸಾಕುನಾಯಿಯನ್ನು ಬಿಟ್ಟು ವಿಮಾನ ಏರಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇದೀಗ ನಾಯಿಯ ಮಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಾಯಿ ಮಾಲಕ ವಿಕ್ರಂ ರಾಮದಾಸ್​ ಲಿಂಗೇಶ್ವರ್​(41) ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು ಕಲ್ಯಾಣನಗರದ ನಿವಾಸಿ ವಿಕ್ರಂ ರಾಮದಾಸ್​ ಲಿಂಗೇಶ್ವರ್​ ಸೋಮವಾರ ಕೊಯಮತ್ತೂರಿಗೆ ತೆರಳಬೇಕಿತ್ತು. ಆದ್ದರಿಂದ ಆತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿ ವಿಂಡೋ ಲಾಕ್​ ಮಾಡಿ ಅದರಲ್ಲಿಯೇ ತಮ್ಮ ಗ್ರೇಟ್​ ಡೇನ್​ ತಳಿಯ ಸಾಕುನಾಯಿಯನ್ನೂ ಬಿಟ್ಟು ತೆರಳಿದ್ದಾನೆ.

ಕಾರಿನ ವಿಂಡೋ ಲಾಕ್​ ಮಾಡಿದ್ದ ಪರಿಣಾಮ ಉಸಿರಾಡಲು ಸಾಧ್ಯವಾಗದೆ ನಾಯಿ ತೀವ್ರವಾಗಿ ನಿತ್ರಾಣಗೊಂಡಿದೆ. ಎರಡು ಮೂರು ಗಂಟೆಗಳ ಕಾಲ ಉಸಿರಾಡಲು ಗಾಳಿ ಇಲ್ಲದ ಕಾರಣ ನಾಯಿಯ ಮೂಗಿನಿಂದ ರಕ್ತ ಒಸರಲು ಆರಂಭವಾಗಿದೆ. ಗಸ್ತಿನಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿ ಕಾರಿನಲ್ಲಿ ನಾಯಿ ಬೊಗಳುತ್ತಿರುವುದನ್ನೂ ಗಮನಿಸಿ ಕಿಟಕಿ ಗಾಜನ್ನು ಒಡೆದು ಶ್ವಾನವನ್ನು ರಕ್ಷಿಸಿದ್ದಾರೆ.

ನಾಯಿಯನ್ನ ರಕ್ಷಿಸಿದ ಬಳಿಕ ಸಿಐಎಸ್ಎಫ್ ಸಿಬ್ಬಂದಿ ಚಾರ್ಲಿ ಎಂಬ ಸ್ವಯಂ ಸೇವಾ ಸಂಸ್ಥೆ(NGO)ಗೆ ಕರೆ ಮಾಡಿ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ. ರಾತ್ರಿ 9ಗಂಟೆ ಸುಮಾರಿಗೆ ನಾಯಿಯ ಮಾಲೀಕ ವಿಕ್ರಂ ಕೊಯಮತ್ತೂರಿನಿಂದ ವಾಪಸ್​ ಆದ ಬಳಿಕ ಸಿಐಎಸ್ಎಫ್ ಸಿಬ್ಬಂದಿ ಆತನನ್ನೂ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಯಿ ಮಾಲೀಕನನ್ನೂ ವಶಕ್ಕೆ ಪಡೆದ ಪೊಲೀಸರು ವಿಕ್ರಂ ವಿರುದ್ಧ ಭಾರತೀಯ ದಂಡ ಸಂಹಿತೆ 11(1)(A) ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಸ್ಟೇಷನ್​ ಬೇಲ್​ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಅಸ್ವಸ್ಥಗೊಂಡಿದ್ದ ನಾಯಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.





Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article