ಮಂಗಳೂರು: ಜೆಸಿಬಿನಿಂದ ಎಟಿಎಂ ದರೋಡೆಗೆತ್ನ ಪ್ರಕರಣದ ನಾಲ್ವರು ಖದೀಮರು ಅಂದರ್

ಮಂಗಳೂರು: ಜೆಸಿಬಿ ಹತ್ತಿಸಿ ಎಟಿಎಂ ಯಂತ್ರವನ್ನು ಕಳವುಗೈಯಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ನಾಲ್ವರು ಖತರ್ನಾಕ್ ಖದೀಮರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಎಟಿಎಂ ಸೇರಿದಂತೆ 15.50 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೊಡ್ಡತಾಂಡದ  ದೇವರಾಜ್ ,  ಭರತ್‌ ಹೆಚ್, ನಾಗರಾಜ ನಾಯ್ಕ  ಹಾಗೂ ಈ ಕೃತ್ಯಕ್ಕೆ ಧನಸಹಾಯ ಮಾಡಿದ ಆರೋಪದ ಮೇರೆಗೆ ಧನರಾಜ್ ನಾಯ್ಕ್ ಯಾನೆ ಧನು ಎಂಬವರನ್ನು ಬಂಧಿಸಲಾಗಿದೆ.


ಆಗಸ್ಟ್ 4ರಂದು ಸುರತ್ಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯ  ಇಡ್ಯಾ ಗ್ರಾಮದ ವಿದ್ಯೋದಯ ಶಾಲೆಯ ಮುಂಭಾಗದ ಕಟ್ಟಡದಲ್ಲಿರುರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎಟಿಎಂ ಕಳವಿಗೆ ಯತ್ನ ನಡೆದಿತ್ತು. ಎಟಿಎಂ ಮುಂಭಾಗದ ಗಾಜನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿ ಕೆಳ ಮಹಡಿಗೆ ಬಿಳಿಸಿ ಹೋಗಿರುವುದು ಕಂಡು ಬಂದಿತ್ತು. 

ಘಟನೆ ನಡೆದ ದಿನವೇ ಕೃತ್ಯಕ್ಕೆ ಬಳಸಲಾದ ಜೆಸಿಬಿಯನ್ನು  ಪಣಂಬೂರು ಠಾಣಾ ವ್ಯಾಪ್ತಿಯ ಕೆಐಓಸಿಎಲ್‌ ಕಡೆಯಿಂದ ಜೋಕಟ್ಟೆ ಕಡೆಗೆ ಹೋಗುವಾಗ ಪತ್ತೆ ಮಾಡಲಾಗಿತ್ತು. ಇದರ  ಮೌಲ್ಯವು 15 ಲಕ್ಷ ಆಗಿರುತ್ತದೆ. ಈ ಜೆಸಿಬಿಯನ್ನು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿತ್ತು. ಇದೀಗ ಕೃತ್ಯಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ  ಒಂದನೇ ಹೆಚ್ಚುವರಿ ಸಿ.ಜೆ.ಎಮ್. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ನ್ಯಾಯಾಲಯವು 1 ರಿಂದ 3ನೇ ಆರೋಪಿತರುಗಳಿಗೆ 4 ದಿವಸಗಳ ಪೊಲೀಸ್ ಕಸ್ಟಡಿ ಹಾಗೂ 4 ನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50,000 ರೂ. ಮೌಲ್ಯದ ಬೈಕನ್ನು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.