ಕೊಚ್ಚಿ: ಏರ್ ಇಂಡಿಯಾ ವಿಮಾನದಲ್ಲಿ ಸುಟ್ಟ ವಾಸನೆ ಬಂದ ಕಾರಣ ದುಬೈನ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊಚ್ಚಿಗೆ ವಾಪಾಸ್ ಆಗಿದೆ.
ಆಗಸ್ಟ್ 2 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (IX 411) ವಿಮಾನವು 175 ಪ್ರಯಾಣಿಕರನ್ನು ಹೊತ್ತು ರಾತ್ರಿ ಕೊಚ್ಚಿಯಿಂದ ಟೇಕ್ ಆಫ್ ಆಗಿತ್ತು. ಈ ವೇಳೆ ಪ್ರಯಾಣಿಕರು ಸುಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಲ್ಯಾಂಡ್ ಮಾಡಲಾಯಿತು.
ಎಂಜಿನಿಯರ್ ತಂಡವು ವಿಮಾನವನ್ನು ಪರಿಶೀಲನೆ ನಡೆಸಿದ್ದು, ಧೂಮಪಾನ ಮಾಡಿದ ಅಥವಾ ತಾಂತ್ರಿಕ ಸಮಸ್ಯೆಯಾದ ಬಗ್ಗೆ ಯಾವುದೇ ಕುರುಹು ಕಂಡುಬಂದಿಲ್ಲ.
ಈರುಳ್ಳಿ ಅಥವಾ ತರಕಾರಿಗಳಿಂದ ಬಂದ ವಾಸನೆಯು ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತು ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.
ಅನಾನುಕೂಲತೆಗೆ ಏರ್ ಇಂಡಿಯಾ ವಿಮಾನ ವಿಷಾದ ವ್ಯಕ್ತಪಡಿಸಿದ್ದು, ಪ್ರಯಾಣಿಕರಿಗೆ ಆಗಸ್ಟ್ 3 ರಂದು ಬೆಳಗಿನ ಜಾವ ವಿಮಾನದ ವ್ಯವಸ್ಥೆ ಮಾಡಲಾಯಿತು.
ಮಧ್ಯಪ್ರಾಚ್ಯ ದೇಶಗಳಿಗೆ ಪ್ರಯಾಣಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಪ್ರಯಾಣಿಕರನ್ನು ಮಾತ್ರವಲ್ಲದೆ ತರಕಾರಿ, ಹಣ್ಣು, ಹೂವು ಸೇರಿದಂತೆ ಬೃಹತ್ ಪ್ರಮಾಣದ ಸರಕುಗಳನ್ನೂ ಹೊತ್ತೊಯ್ಯುತ್ತಿರುತ್ತದೆ