ಕಲಬುರಗಿ: ಬಾಲಕನೋರ್ವನು ಒಂದೇ ಹಾವಿನಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಕಡಿತಕ್ಕೊಳಗಾದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ ಅಚ್ಚರಿಯ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಹಲಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್ ಕಳೆದ ಎರಡು ತಿಂಗಳಲ್ಲಿ ಒಂದೇ ಹಾವಿನಿಂದ 9 ಬಾರಿ ಕಡಿತಕ್ಕೊಳಗಾಗಿದ್ದಾನೆ. ಇದು ಒಂದು ರೀತಿಯಲ್ಲಿ ವಿಚಿತ್ರ ಅನ್ನಿಸಿದರೂ ನಂಬಲೇಬೇಕಾದ ಸತ್ಯವೂ ಹೌದು. ಈತನಿಗೆ ಮನೆಯಲ್ಲಿದ್ದ ವೇಳೆ ಮೊದಲ ಬಾರಿ ಜುಲೈ 3 ರಂದು ಹಾವು ಕಡಿಯಿತು. ಬಳಿಕ ಎರಡು ಮೂರು ಬಾರಿ ಹಾವು ಕಡಿದಿದೆ. ಆದ್ದರಿಂದ ದಂಪತಿ ಹೆದರಿ ಹಲಕರ್ಟಿ ಗ್ರಾಮದ ಮನೆ ಬಿಟ್ಟಿದ್ದರು.
ಹಲಕರ್ಟಿ ಬಳಿಕ ಚಿತ್ತಾಪುರ ತಾಲ್ಲುಕಿನ ವಾಡಿಯಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದರು. ಆದರೆ, ಇಲ್ಲಿಗೂ ಬಂದಿರುವ ಅದೇ ಹಾವು ಮತ್ತೆ ಪ್ರಜ್ವಲ್ಗೆ ಕಚ್ಚಲಾರಂಭಿಸಿದೆ. ಬಾಲಕನ ಕೈ-ಕಾಲು ಸೇರಿ ಹಾವು ವಿವಿಧಡೆ ಕಚ್ಚಿದೆ. ಆದರೆ, ಹಾವು ಮಾತ್ರ ಪಾಲಕರಿಗಾಗಲಿ ಅಥವಾ ಕುಟುಂಬಸ್ಥರಿಗಾಗಲಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಕನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಇದೊಂದು ರೀತಿಯಲ್ಲಿ ಸಿನಿಮಾದ ಕತೆಯಂತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
9 ಬಾರಿ ಹಾವು ಕಡಿತಕ್ಕೆ ಒಳಗಾದಾಗ 6 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, 3 ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಎರಡ್ಮೂರು ದಿನದಲ್ಲೆ ಮತ್ತೆ ಹಾವು ಕಡಿಯುತ್ತಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಪ್ರಜ್ವಲ್ಗೆ ಚಿಕಿತ್ಸೆ ಮುಂದುವರಿದಿದೆ.