13 ವರ್ಷದ ವಿದ್ಯಾರ್ಥಿನಿಗೆ ನಾಲ್ಕು ವಿದ್ಯಾರ್ಥಿಗಳಿಂದ ಕಿರುಕುಳ- ಎರಡು ಸಮುದಾಯಗಳ ನಡುವೆ ಘರ್ಷಣೆ


ಜೈಪುರ : ರಾಜಸ್ಥಾನದ ಬಿಲ್ವಾರ್‌ನ ಮಂಡಲ್ ಪ್ರದೇಶದ ಸರ್ಕಾರಿ ಶಾಲೆಯೊಂದರ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ತನಗೆ ನಾಲ್ವರು ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಸೋಮವಾರ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

“ತನ್ನ ನೀರಿನ ಬಾಟಲಿಯಿಂದ ಮೂತ್ರದಂತ ವಾಸನೆ ಬರುತ್ತಿದೆ ಮತ್ತು 'ಐ ಲವ್ ಯೂ' ಎಂದು ಬರೆದಿರುವ ಪತ್ರ ಬ್ಯಾಗ್‌ನಲ್ಲಿ ಲಭಿಸಿದೆ' ಎಂದು 8 ನೇ ತರಗತಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿ ನಾವು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಗ್ರಾಮದ ಕೆಲವರು ಅಲ್ಲಿಗೆ ಬಂದು ಗಲಾಟೆ ಮಾಡಿದ್ದಾರೆ. ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು ಮತ್ತು ಕಲ್ಲು ತೂರಾಟ ನಡೆಸಿದ್ದಾರೆ' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲೆಯ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಘರ್ಷಣೆ ಸಂಬಂಧ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. 

ಘಟನೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, 'ಈ ಘಟನೆಯು ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕಾರಣವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.