ಯುವಿ ತಾಯಿಗೆ ಬೆದರಿಕೆ ಹಾಕಿ ಹಣ ಲಪಟಾಯಿಸಲು ಯತ್ನ: ವಂಚಕಿಯನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದೇ ರೋಚಕ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್​ ತಾಯಿಗೆ ಬೆದರಿಕೆ ಹಾಕಿ ಹಣ ಸುಲಿಗೆತ್ನಿಸಿದ ಖತರ್ನಾಕ್ ಮಹಿಳೆಯೊಬ್ಬಳನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಯುವಿಯವರ ತಾಯಿ ಶಬ್ನಮ್​ ಸಿಂಗ್​ ನೀಡಿದ ದೂರಿನನ್ವಯ ಹೇಮಾ ಕೌಶಿಕ್​ ಎಂಬಾಕೆಯನ್ನು ಬಂಧಿಸಲಾಗಿದೆ. ಯುವಿ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡಲು ಆರೋಪಿತೆ ಹೇಮಾ ಪ್ರಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಯುವಿ ಸಹೋದರ ಸೊರ್ವಾರ್​ ಸಿಂಗ್​ರ ಆರೈಕೆಗೆ ಹೇಮಾ ಕೌಶಿಕ್ ನನ್ನು ನೇಮಿಸಲಾಗಿತ್ತು. ಆದರೆ, ಆಕೆಯ ಕೆಲಸದಿಂದ ಅಸಮಾಧಾನಗೊಂಡ ಯುವಿ ಕುಟುಂಬ ಆಕೆಯನ್ನು ಕೆಲಸಕ್ಕೆ ಸೇರಿದ 20 ದಿನಗಳ ಬಳಿಕ ತೆಗೆದು ಹಾಕಿದ್ದರು. ಇದೇ ದ್ವೇಷದಲ್ಲಿ ಆರೋಪಿ ಹೇಮಾ, ಯುವಿವರ ತಾಯಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. 

40 ಲಕ್ಷ ರೂ. ನೀಡದಿದ್ದರೆ ಸೋರ್ವರ್ ಸಿಂಗ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತೇನೆ. ಕುಟುಂಬದ ಗೌರವವನ್ನು ಹಾಳು ಮಾಡುವುದಾಗಿ ಹೇಮಾ ಬೆದರಿಕೆ ಹಾಕಿದ್ದಳು. ಆದ್ದರಿಂದ ಶಬ್ನಮ್​ ಸಿಂಗ್​ ಪೊಲೀಸ್ ದೂರು ನೀಡಿದ್ದರು. ದೂರು ನೀಡಿದ ಬಳಿಕ ಹೇಮಾಳನ್ನು ಬಲೆಗೆ ಕೆಡವಲು ಪೊಲೀಸ್ ಪ್ಲ್ಯಾನ್​ ಮಾಡಿ, ಹೇಮಾ ಕೇಳಿದ ಹಣದಲ್ಲಿ ಮೊದಲ ಹಂತವಾಗಿ 5 ಲಕ್ಷ ರೂ. ಕೊಡುವುದಾಗಿ ಯುವಿ ಕುಟುಂಬದಿಂದ ಆಕೆಗೆ ಮಸೇಜ್​ ಕಳುಹಿಸಲಾಯಿತು. ಹಣ ಸಿಗುತ್ತದೆಂಬ ಸಂತೋಷದಲ್ಲಿ ಅದನ್ನು ವಸೂಲಿ ಮಾಡಲು ಹೇಮಾ ಆಗಮಿಸಿದಾಗ ಆಕೆಯನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಸದ್ಯ ವಿಚಾರಣೆ ಮುಂದುವರಿದಿದೆ.