ಪೇಶಾವರ : ಭಾರತದಿಂದ ಹೋಗಿ ತನ್ನ ಫೇಸ್‌ಬುಕ್ ಗೆಳೆಯನನ್ನು ವಿವಾಹವಾಗಿದ್ದ ಇಬ್ಬರು ಮಕ್ಕಳ ತಾಯಿ, 34 ವರ್ಷದ ಮಹಿಳೆಗೆ, ಅವರು ಮತಾಂತರಗೊಂಡು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಕ್ಕಾಗಿ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನಗದು ಮತ್ತು ಭೂಮಿಯನ್ನು ಉಡುಗೊರೆ ನೀಡಿದ್ದಾರೆ.
ಅಂಜು ಇಸ್ಲಾಂಗೆ ಮತಾಂತರಗೊಂಡ ಬಳಿಕ ಫಾತಿಮಾ
ಎಂದು ಹೆಸರು ಬದಲಿಸಿಕೊಂಡಿದ್ದರು. ಜುಲೈ 25ರಂದು ತನ್ನ 29 ವರ್ಷದ ಗೆಳೆಯ ನಸ್ರುಲ್ಲಾ ಅವರನ್ನು ಉಪ್ಪೆದಿ ಜಿಲ್ಲೆಯ ಗ್ರಾಮವೊಂದರಲ್ಲಿ ಮದುವೆಯಾಗಿದ್ದರು.
ಶನಿವಾರ ಆಕೆಯನ್ನು ಭೇಟಿಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೊಹಿಸಿನ್ ಖಾನ್ ಅಬ್ಬಾಸಿ ಅವರು, ನೆರವಿನ ಚೆಕ್ (ಮೊತ್ತ ಬಹಿರಂಗಪಡಿಸಿಲ್ಲ) ಹಾಗೂ 10 ಮಾರ್ಲಾ ಅಳತೆಯ (ಅಂದಾಜು 2,722 ಚದರ ಅಡಿ) ಭೂಮಿಗೆ
ಸಂಬಂಧಿಸಿದ ದಾಖಲಾತಿಗಳನ್ನು ಹಸ್ತಾಂತರಿಸಿದರು.
'ಇಸ್ಲಾಂಗೆ ಮತಾಂತರಗೊಂಡಿರುವ ಅವರು ಯಾವುದೇ ತೊಡಕಿಲ್ಲದೆ ಇಲ್ಲಿ ಹೊಸ ಬದುಕು ನಡೆಸಬೇಕು ಎಂದು ಈ ಕೊಡುಗೆ ನೀಡಿದ್ದೇನೆ. ಆಕೆಯನ್ನು ನಮ್ಮ ಧರ್ಮಕ್ಕೆ ಸ್ವಾಗತಿಸುವುದು ಮತ್ತು ಮದುವೆಗಾಗಿ ಅವರನ್ನು ಅಭಿನಂದಿಸುವುದು ನನ್ನ ಉದ್ದೇಶವಾಗಿದೆ' ಎಂದು ಅಬ್ಬಾಸಿ ತಿಳಿಸಿದರು.