ಬಂಟ್ವಾಳ: ಕಾರು ಅಪಘಾತಕ್ಕೆ ಪುತ್ತೂರಿನ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಗುಡ್ಡಕ್ಕೆ‌ ಢಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು  ರಾಷ್ಟ್ರೀಯ ಹೆದ್ದಾರಿ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.

ಪುತ್ತೂರಿನ ಕೂರ್ನಡ್ಕ ನಿವಾಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ ಖತೀಜತ್ ಹನಾ (20) ಮೃತಪಟ್ಟ ದುರ್ದೈವಿ ಯುವತಿ. 

ಈ ಅಪಘಾತದ ವೇಳೆ ಕಾರಿನಲ್ಲಿದಲ್ಲಿದ್ದ ಖತೀಜತ್ ಹನಾ ಅವರ ತಾಯಿ ಸಮೀಮಾ ಹಾಗೂ ಕಾರು ಚಾಲಕ ಶಾನ್ ಯಾವುದೇ ಅಪಾಯವಿಲ್ಲದೆ ಸಣ್ಣಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌ ಖತೀಜತ್ ಹನಾ ತಾಯಿ ಸಮೀಮಾರೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಕಾರಿನಲ್ಲಿ ತೆರಳುತ್ತಿದ್ದರು. ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭ ರಾಮಲ್ ಕಟ್ಟೆ ಕಾರು ತಲುಪುವ ವೇಳೆ ಮಳೆ ಜೋರಾಗಿ ಸುರಿಯುತ್ತಿದ್ದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿ ರಸ್ತೆಗೆ ಪಲ್ಟಿಯಾಗಿದೆ. ಈ ಅಪಘಾತದ ತೀವ್ರತೆಗೆ ಹಿಂಭಾಗದ ಕಾರಿನ ಬಾಗಿಲು ಕಿತ್ತು ಒಳಗಿದ್ದ ಖತೀಜತ್ ಹನಾ ಹೊರೆಕ್ಕೆಸೆಯಲ್ಪಟ್ಟಿದ್ದಾಳೆ.


ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈಕೆಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ  ಅದಾಗಲೇ ಆಕೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್ಐ ಸುತೇಶ್ ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.