-->
1000938341
ತಂದೆಗೆ ವರ್ಗಾವಣೆ, ಪುತ್ರಿಯ ನಿಯೋಜನೆ: ಮಂಡ್ಯ ಸೆಂಟ್ರಲ್ ಜೈಲ್ ನಲ್ಲಿ ಅಪರೂಪದ ಘಟನೆ

ತಂದೆಗೆ ವರ್ಗಾವಣೆ, ಪುತ್ರಿಯ ನಿಯೋಜನೆ: ಮಂಡ್ಯ ಸೆಂಟ್ರಲ್ ಜೈಲ್ ನಲ್ಲಿ ಅಪರೂಪದ ಘಟನೆ


ಮಂಡ್ಯ: ಅದೊಂದು ವಿಶೇಷ ಕ್ಷಣ. ಎಲ್ಲರಿಗೂ ಇಂತಹ ಒಂದು ಯೋಗಾಯೋಗ ಕೈಗೂಡಿ ಬರಲ್ಲ. ಒಂದೆಡೆ ತಂದೆಗರ ವರ್ಗಾವಣೆ, ಮತ್ತೊಂದೆಡೆ ಅದೇ ಸ್ಥಳಕ್ಕೆ ಪುತ್ರಿಯ ನಿಯೋಜನೆ. ಅಧಿಕಾರ ಹಸ್ತಾಂತರದ ವೇಳೆ ತಂದೆಗೆ ಹೆಮ್ಮೆಯಾದರೆ ಇತ್ತ ಪುತ್ರಿಗೆ ಹೇಳಿಕೊಳ್ಳಲಾಗದ ಸಂತೋಷ.

ಹೌದು, ಇಂತಹದೊಂದು ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದ್ದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ. ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ.ಎಸ್.ವೆಂಕಟೇಶ್ ತಮ್ಮ ಪುತ್ರಿಯೂ ಆದ ನೂತನ ಎಸ್‌ಐ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷವೆನಿಸಿದೆ. ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ತಂದೆ ಹಾಗೂ ಪುತ್ರಿ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ನಿವಾಸಿ ವೆಂಕಟೇಶ್ 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನು ಇವರನ್ನು ಮಿಲಿಟರಿ ಮ್ಯಾನ್ ಎಂತಲೂ ಕರೆಯಲಾಗುತ್ತದೆ. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‌ನ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕರ್ತವ್ಯ ನಿರ್ವಹಿಸಿ, ಮತ್ತೆ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆಗೆ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಇನ್ನು 2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅವರ ಮೊದಲ ನಿಯೋಜನೆ ಕೂಡ ಮಂಡ್ಯದಲ್ಲೇ ಆಗಿದೆ. ಅದೂ ಕೂಡ ಅದೃಷ್ಟವೆಂಬಂತೆ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಸಿಕ್ಕಿದೆ. ಅಂತೆಯೇ ಠಾಣೆಯಲ್ಲಿ ಮಂಗಳವಾರ ತಂದೆಯಿಂದಲೇ ಅಧಿಕಾರ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ. ಇವರು ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ.

Ads on article

Advertise in articles 1

advertising articles 2

Advertise under the article