ಪ್ರೇಯಸಿಯೊಂದಿಗೆ ಅನುಚಿತ ವರ್ತನೆ ವಿಚಾರಕ್ಕೆ ಜಗಳ: ಕಾಲೇಜು ಆವರಣದಲ್ಲಿಯೇ ಚಾಕು ಇರಿದು ವಿದ್ಯಾರ್ಥಿಯ ಕೊಲೆ

ನವದೆಹಲಿ: ದೆಹಲಿ ವಿವಿಯ ಆರ್ಯಭಟ ಕಾಲೇಜಿನ ಹೊರಭಾಗದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. 

ಪಶ್ಚಿಮ ವಿಹಾರ್ ನಿವಾಸಿ ನಿಖಿಲ್ ಚೌಹಾಣ್ (19) ಕೊಲೆಯಾದ ವಿದ್ಯಾರ್ಥಿ. ಈತ ರಾಜ್ಯಶಾಸ್ತ್ರದಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದನು.

ತನ್ನ ಪ್ರೇಯಸಿಯೊಂದಿಗೆ ಅನುಚಿತ ವರ್ತನೆ ಮಾಡಿರುವ ವಿಚಾರವಾಗಿ ಮೃತ ನಿಖಿಲ್ ಹಾಗೂ ಮತ್ತೋರ್ವನ ನಡುವೆ ಕಳೆದ ವಾರ ವಾಗ್ವಾದ ನಡೆದಿತ್ತು. ಈ ದ್ವೇಷದಿಂದ ಆರೋಪಿಯು ತನ್ನ ಮೂವರು ಸಹಚರರೊಂದಿಗೆ ಬಂದು ಕಾಲೇಜು ಆವರಣದಲ್ಲಿ ನಿಖಿಲ್‌ಗೆ ಚಾಕುವಿನಿಂದ ಇರಿದಿದ್ದಾನೆ.

ತಕ್ಷಣ ಚಾಕು ಇರಿತಕ್ಕೊಳಗಾದ ನಿಖಿಲ್‌ನನ್ನು ಮೋತಿ ಬಾಗ್‌ನ ಚರಕ್ ಪಾಲಿಕಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.