ಉಸಿರುಗಟ್ಟಿಸಿ ವೃದ್ಧೆಯ ಕೊಲೆಗೈದು ದರೋಡೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್
Saturday, June 3, 2023
ಬೆಂಗಳೂರು: ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯೊಬ್ಬರನ್ನು ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದು ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖತರ್ನಾಕ್ ಖದೀಮರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಿದ್ದರಾಜು, ಅಶೋಕ್ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಬಂಧಿತ ಆರೋಪಿಗಳು. ಮೇ 28ರಂದು ಸಂಜೆ ಮಹಾಲಕ್ಷ್ಮೀ ಲೇಔಟ್‌ನ ಅಂಚೆ ಕಚೇರಿ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಕಮಲಮ್ಮ(82)ನವರ ಕೈ-ಕಾಲು ಕಟ್ಟಿ ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಲಾಗಿತ್ತು. ಪೊಲೀಸರು ತಕ್ಷಣ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಸಿದ್ದರಾಜು ಎಂಬವನು ಮೂರು ತಿಂಗಳ ಹಿಂದೆ ಕಮಲಮ್ಮನವರ ಮನೆಯಲ್ಲಿ ಪ್ಲಂಬರ್ ಕೆಲಸ ಮಾಡಿದ್ದ. ಈ ವೇಳೆ ಮನೆಯಲ್ಲಿ ಅವರು ಒಬ್ಬರೆ ಇದ್ದು, ಅವರ ಬಳಿ ಚಿನ್ನಾಭರಣಗಳಿವೆ ಎಂಬುದನ್ನು ಖಚಿತಪಡಿಸಿಕೊಂಡಿದ್ದ. ಈ ವಿಚಾರವನ್ನು ಗೆಳೆಯ ಅಶೋಕ್ ಬಳಿ ಪ್ರಸ್ತಾಪಿಸಿ ಇಬ್ಬರೂ ಸೇರಿ ಸಂಚು ರೂಪಿಸಿದ್ದಾರೆ.
ಕೊಲೆ ನಡೆದ ದಿನ ಇಬ್ಬರೂ ಆರೋಪಿಗಳು ಎರಡು ಬಾರಿ ಅವರ ಮನೆಗೆ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಗಂಟೆಗೆ ಹೋಗಿ, ಬಾಡಿಗೆಗೆ ಮನೆ ಬೇಕೆಂದು ಕೇಳಿದ್ದಾರೆ. ಆಗ ವೃದ್ಧೆ ಬಾಡಿಗೆ ಮನೆ ಇಲ್ಲವೆಂದು ಬಾಗಿಲನ್ನು ತೆಗೆದಿರಲಿಲ್ಲ. ಮತ್ತೆ ಸಂಜೆ ಆರು ಗಂಟೆಗೆ ವೇಳೆಗೆ ಪುನಃ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಕಮಲಮ್ಮನವರು ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು.
ತಕ್ಷಣ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಮೈಸೂರಿನಲ್ಲಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.