40ಕ್ಕೂ ಅಧಿಕ ಅಪ್ರಾಪ್ತರು, ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ: ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲು


ಜೈಪುರ: ಕಾಮುಕ ಯುವಕನೋರ್ವನು 40ಕ್ಕೂ ಅಧಿಕ ಅಪ್ರಾಪ್ತೆಯರು ಸೇರಿದಂತೆ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೃತ್ಯದ ಫೋಟೋ ಹಾಗೂ ವೀಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಖೇಶ್ ಕುಮಾರ್ ದಮಾಮಿ ಬಂಧಿತ ಆರೋಪಿ. ಪೊಲೀಸರು ಈತನನ್ನು ರಾಜಸ್ಥಾನದ ಜೋಧಪುರದಲ್ಲಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಮುಖೇಶ್ ಮದುವೆ ಸಮಾರಂಭಗಳಲ್ಲಿ ಬ್ಯಾಂಡ್ ಬಾರಿಸುತ್ತಿದ್ದ. ಮದುವೆ ಮನೆಗಳಲ್ಲಿ ಬಾಲಕಿಯರು, ಯುವತಿಯರು ಹಾಗೂ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಸ್ನೇಹ ಸಂಪಾದಿಸುತ್ತಿದ್ದ. ಬಳಿಕ ಚಾಟಿಂಗ್ ಹಾಗೂ ವೀಡಿಯೋ ಕರೆಗಳ ಮೂಲಕ ಅವರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದ.

ದಿನ ಕಳೆದಂತೆ ಅವರೊಡನೆ ವೀಡಿಯೋ ಕರೆಯಲ್ಲಿ ಮಾತನಾಡುತ್ತ ಅವರಿಗೆ ತಿಳಿಯದೆ ಸ್ಕ್ರೀನ್ ರೆಕಾರ್ಡಿಂಗ್ ಮಾಡಿ ಅದರ ಫೋಟೋಗಳನ್ನು ಎಡಿಟ್ ಮಾಡುತ್ತಿದ್ದ. ಬಳಿಕ ಆ ಫೋಟೊಗಳನ್ನು ಕಳಿಸಿ ಸಂತ್ರಸ್ತರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆರೋಪಿ ತನ್ನ ಸ್ವಂತ ಅತ್ತೆಯ ಮೇಲೂ ದೌರ್ಜನ್ಯ ಎಸಗಿದ್ದ ಕಾರಣ ಆತನ ಮದುವೆ ಮುರಿದು ಬಿದ್ದಿದೆ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿಯ ಹೇಯ ಕೃತ್ಯದಿಂದಾಗಿ ದೌರ್ಜನ್ಯಕ್ಕೊಳಗಾದ ತಾಯಿ ಹಾಗೂ ಪುತ್ರಿ ಇಬ್ಬರು ಜೂನ್ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತ್ರಸ್ತರ ಕುಟುಂಬಸ್ಥರು ನೀಡಿರುವ ದೂರಿನ್ವಯ ಮೃತಪಟ್ಟವರ ಫೋನ್ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆ ಬಳಿಕ ತಲೆಮರೆಸಿಕೊಂಡಿದ್ದ ಮುಖೇಶ್‌ನನ್ನು ಜೋಧಪುರದಲ್ಲಿ ಬಂಧಿಸಲಾಗಿತ್ತು.

ಆರೋಪಿಯಿಂದ ಪೆನ್‌ಡ್ರೈವ್ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 40ಕ್ಕೂ ಅಧಿಕ ಅಪ್ರಾಪ್ತ ವಯಸ್ಕ ಬಾಲಕಿಯರು ಹಾಗೂ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ವೀಡಿಯೋಗಳನ್ನು ಸೆರೆ ಹಿಡಿಯಲಾಗಿದೆ. ಬಂಧಿತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಾಮ್‌ಧಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.