3 ಈಡಿಯಟ್ಸ್ ಸಿನಿಮಾದ ದೃಶ್ಯದಂತೆ ಹೆರಿಗೆ ಮಾಡಿಸಲು ಹೋಗಿ ಆಸ್ಪತ್ರೆ ಸಿಬ್ಬಂದಿಯಿಂದ ಎಡವಟ್ಟು: ಅವಳಿಮಕ್ಕಳಿಗೆ ಜನ್ಮ ನೀಡಿ ಗರ್ಭಿಣಿ ಸಾವು
Thursday, June 8, 2023
ಪಟ್ನಾ: ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ 3 ಈಡಿಯಟ್ಸ್‌ನಲ್ಲಿ ಬರುವ ದೃಶ್ಯವೊಂದನ್ನು ನಿಜವಾಗಿ ಅನುಕರಿಸಲು ಹೋಗಿ ಗರ್ಭಿಣಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮನೀಡಿ ದಾರುಣವಾಗಿ ಮೃತಪಟ್ಟ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಲೈನ್ ಬಜಾರ್‌ನಲ್ಲಿರುವ ಸಮರ್ಪಣ್ ಹೆರಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ಮಾಲತಿ ದೇವಿ(22) ಮೃತ ದುರ್ದೈವಿ ಯುವತಿ.
ಸೋಮವಾರ ಸಂಜೆ ವೇಳೆಗೆ ಮಾಲತಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದ್ದರಿಂದ ಮನೆಯವರು ತಕ್ಷಣ ಅವರನ್ನು ಪೂರ್ಣಿಯಾದ ಲೈನ್ ಬಜಾರ್ ನಲ್ಲಿರುವ ಸಮರ್ಪಣ್ ಹೆರಿಗೆ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೆ ಹೆರಿಗೆ ಮಾಡಿಸುವ ವೈದ್ಯೆ ಸೀಮಾ ಕುಮಾರಿ ರಜೆಯಲ್ಲಿದ್ದರು. ಆದರೂ ಆಸ್ಪತ್ರೆಯ ಸಹ ಸಿಬ್ಬಂದಿ ಗರ್ಭಿಣಿಯನ್ನು ದಾಖಲಿಸಿಕೊಂಡಿದ್ದಾರೆ.
ಆಪರೇಷನ್ ಥಿಯೇಟರ್‌ಗೆ ಕರೆದೊಯ್ದ ಸಿಬ್ಬಂದಿ ವೈದ್ಯೆ ಸೀಮಾ ಕುಮಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ನರ್ಸ್ ಒಬ್ಬರಿಗೆ ವೀಡಿಯೋ ಕರೆ ಮಾಡಿದ ವೈದ್ಯೆ ಸೂಚನೆಗಳನ್ನು ನೀಡಿ ಹೆರಿಗೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಈ ವೇಳೆ ವೈದ್ಯೆ ನೀಡಿರುವ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನರ್ಸ್ ರಕ್ತನಾಳವನ್ನು ಕತ್ತರಿಸಿದ್ದಾಳೆ. ಪರಿಣಾಮ ಮಾಲತಿ ದೇವಿ ಅವಳಿ ಮಕ್ಕಳಿಗೆ ಜನ್ಮ ನೀಡಿ ಪ್ರಾಣ ಬಿಟ್ಟಿದ್ದಾರೆ.
ಅವಳಿ ಮಕ್ಕಳಿಬ್ಬರು ಆರೋಗ್ಯಕರವಾಗಿದ್ದು, ತಾಯಿಯ ಮೃತಪಟ್ಟಿರುವ ವಿಚಾರ ತಿಳಿದು ಮಹಿಳೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಖಜಾಂಚಿ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಪರಿಸ್ಥಿತಿಯನ್ನು ಹತ್ತೋಟಿಗೆ ತಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಖಜಾಂಚಿ ಪೊಲೀಸ್ ಠಾಣಾಧಿಕಾರಿ ರಂಜಿತ್ ಕುಮಾರ್, ಮೃತರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ನೀಡಿರುವ ದೂರನ್ನು ನಾವು ಸ್ವೀಕರಿಸಿದ್ದೇವೆ. ಪೂರ್ಣಿಯಾ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಗೆ ದೂರನ್ನು ರವಾನಿಸಲಾಗಿದ್ದು ಹೆರಿಗೆ ವೇಳೆ ನಿರ್ಲಕ್ಷ್ಯ ತೋರಿರುವ ಆಸ್ಪತ್ರೆ ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.