ವಿದೇಶಿ ಯುವತಿಗಾಗಿ ಪ್ರಾಣತ್ಯಾಗ ಮಾಡಿದ ಕರ್ನಾಟಕದ ಯುವಕ
Monday, May 1, 2023
ಕಲಬುರಗಿ: ತಾನು ಪ್ರೀತಿ ಮಾಡಿದ್ದ ವಿದೇಶಿ ಹುಡುಗಿಯೊಂದಿಗೆ ಸಣ್ಣದಾಗಿ ಮನಸ್ತಾಪ ಮಾಡಿಕೊಂಡು ಜಗಳ ಮಾಡಿದ್ದ ಕರ್ನಾಟಕದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ನಗರದ ಕುಸನೂರು ರಸ್ತೆಯ ಜ್ಯೋತಿ ಬಾಪುಲೆ ನಗರ, ಬಾಪುರೇ ಲೇಔಟ್ ನಿವಾಸಿ ಶಶಾಂಕ ಕಟ್ಟಿಮನಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಗುಲ್ಬರ್ಗ ವಿವಿಯ ಆವರಣದ ಕುಲಪತಿಗಳ ಮನೆ ಹಿಂದುಗಡೆಯ ಹಾಳು ಬಿದ್ದ ಕೋಣೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ.
ಬೆಳಗ್ಗೆ ಕುರಿಗಾಯಿ ಬಾಲಕ ಶವವನ್ನು ನೋಡಿ ವಿವಿ ಸಿಬ್ಬಂದಿಗೆ ತಿಳಿಸಿದ್ದ ಅವರು, ಕೂಡಲೇ ವಿವಿ ಆವರಣದಲ್ಲಿ ಇರುವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದಾಗ ವಿಷಯ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಹುಡುಗಿಯ ಪ್ರೇಮ
ಆತ್ಮಹತ್ಯೆಗೆ ಶರಣಾದ ಶಶಾಂಕ ಕಟ್ಟಿಮನಿ ಫಿಲಿಫೈನ್ಸ್ ದೇಶದ ಯುವತಿಯೊಂದಿಗೆ ಸಲುಗೆಯಿಂದ ಇದ್ದ. ಅದನ್ನು ಪ್ರೇಮವೆಂದೂ ತಿಳಿದಿದ್ದ. ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರಲು ಯುವತಿ ಮನೆಯವರಿಗೆ ನೀಡಿದ ಮಾಹಿತಿಯೇ ಕಾರಣ ಎನ್ನಲಾಗುತ್ತಿದೆ. ಈ ಅಂಶವನ್ನು ಪೊಲೀಸರು ದೂರಿನಲ್ಲೂ ದಾಖಲು ಮಾಡಿದ್ದಾರೆ
ಬೆಳಗ್ಗೆಯಿಂದ ಮಗ ಕಾಣುತ್ತಿರಲಿಲ್ಲ, ಯುವತಿಯೂ ಶಶಾಂಕ ಅವರ ಸಹೋದರಿಗೆ ಕರೆ ಮಾಡಿ ನಿಮ್ಮ ತಮ್ಮ ಎಲ್ಲಿದ್ದಾನೆ ಎಂದು ಕೇಳಿದ್ದಾಳೆ. ನಂತರ ಪಾಲಕರು ಆತನ ಹುಡುಕಾಟದಲ್ಲಿ ತೊಡಗಿದ್ದಾಗ ವಿವಿ ಆವರಣದಲ್ಲಿ ಶವ ಪತ್ತೆಯಾಗಿದೆ.ಈ ಎಲ್ಲ ಬೆಳವಣಿಗೆಯಿಂದ ಇದೊಂದು ಪ್ರೇಮ ಪ್ರಕರಣ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಈ ಕುರಿತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.