ವಿವಾಹಕ್ಕೆ ಒಲ್ಲೆನೆಂದ ಪ್ರಿಯಕರನಿಗೆ ಬಿಸಿನೀರು ಎರಚಿದ ಪ್ರೇಯಸಿ: ಎಸ್ಕೇಪ್ ಆದ ಚಾಲಕಿಯ ಹುಡುಕಾಟದಲ್ಲಿ ಪೊಲೀಸರು
Tuesday, May 30, 2023
ಬೆಂಗಳೂರು : ವಿವಾಹವಾಗಲು ಒಲ್ಲೆ ಎಂದ ಪ್ರಿಯಕರನ ಮೈಮೇಲೆ ಪ್ರೇಯಸಿಯೇ ಬಿಸಿನೀರು ಎರಚಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ ನಲ್ಲಿ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯಭೀಮಾಶಂಕರ ಆರ್ಯ ಎಂಬಾತನಿಗೆ ಅಫಜಲಪುರ ಮೂಲದ ಜ್ಯೋತಿ ದೊಡ್ಡಮನಿ ಎಂಬಾಕೆಯ ಪರಿಚಯವಾಗಿದೆ. ನಾಲ್ಕು ವರ್ಷಗಳ ಹಿಂದೆ ಪರಿಚಯವಾದ ಇವರಿಬ್ಬರ ನಡುವೆ ಆ ಬಳಿಕ ಪ್ರೇಮಾಂಕುರವಾಗಿತ್ತು. ಆದರೆ ಜ್ಯೋತಿಗೆ ಈ ಮೊದಲೇ ಮದುವೆಯಾಗಿದೆಯೆಂದು ಎರಡು ವರ್ಷಗಳ ಹಿಂದಷ್ಟೆ ಭೀಮಾಶಂಕರ್ ಗೆ ತಿಳಿದು ಬಂದಿದೆ. ಆಕೆ ವಿವಾಹಿತೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಭೀಮಾಶಂಕರ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ.
ಆಕೆ ಬೆಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಜ್ಯೋತಿಗೆ ತಾನು ವಾಸವಿದ್ದ ಚಾಮರಾಜಪೇಟೆಯ ಬಾಡಿಗೆ ರೂಮನ್ನು ಬಿಟ್ಟು ಕೊಟ್ಟಿದ್ದ. ಬಳಿಕ ತಾನು ಬೊಮ್ಮಸಂದ್ರ ಬಳಿಯ ಯಾರಂಡಳ್ಳಿಯಲ್ಲಿ ಸ್ನೇಹಿತನೊಂದಿಗೆ ವಾಸವಿದ್ದ. ಈ ನಡುವೆ ಮೇ 5ರಂದು ಭೀಮಾಶಂಕರನಿಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ಮೇ 23ರಂದು ಭೀಮಾಶಂಕರ ಮತ್ತೆ ಬೆಂಗಳೂರಿಗೆ ಬಂದಿದ್ದ. ಮೇ 25ರಂದು ಸಂಜೆ ತನ್ನ ಬರ್ತ್ ಡೇ ಸಿದ್ಧತೆಗೆ ಸಹಾಯ ಮಾಡುವಂತೆ ಜ್ಯೋತಿ ಆತನನ್ನು ತನ್ನ ರೂಮಿಗೆ ಕರೆಸಿಕೊಂಡಿದ್ದಳು.
ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ಭೀಮಾಶಂಕರ 'ಇಬ್ಬರಿಗೂ ಮದುವೆಯಾಗಿದೆ ಇನ್ನುಮುಂದೆ ಸಿಗುವುದು ಬೇಡ' ಎಂದಿದ್ದಾನೆ. ಬಳಿಕ ಸುಮಾರು ಒಂದು ಗಂಟೆಗಳ ಕಾಲ ತನ್ನ ಪತ್ನಿ ಹಾಗೂ ಪೋಷಕರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡಿದ್ದ ಜ್ಯೋತಿ ಸಿಟ್ಟಿಗೆದ್ದಿದ್ದಳು. ಬಳಿಕ ಮೈ ಹುಷಾರಿಲ್ಲ, ಡ್ರಿಪ್ಸ್ ಹಾಕು ಎಂದಿದ್ದ ಭೀಮಾಶಂಕರನಿಗೆ ಆರೋಪಿತೆಯೇ ಡ್ರಿಪ್ಸ್ ಹಾಕಿದ್ದಳು. ಬಳಿಕ ನಿದ್ರೆಗೆ ಜಾರಿದ್ದ ಭೀಮಾಶಂಕರ್ ಗೆ ಮೇ 26ರ ಬೆಳಗ್ಗಿನ ಜಾವ ಸೈಲೆಂಟಾಗಿ ಅಡುಗೆ ಕೋಣೆಯಲ್ಲಿ ಬಿಸಿ ನೀರು ಕಾಯಿಸಿ ತಂದ ಆರೋಪಿ ಭೀಮಾಶಂಕರನ ಮೈಮೇಲೆ ಎರಚಿದ್ದಾಳೆ.
ಬಳಿಕ ಬಿಯರ್ ಬಾಟಲ್ ನಿಂದ ಆತನ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ತೀವ್ರ ಗಾಯಗಳಿಂದ ಕಿರುಚಾಡುತ್ತಿದ್ದ ಭೀಮಾಶಂಕರನನ್ನ ಮನೆ ಮಾಲೀಕ ಸೈಯದ್ ಗಮನಿಸಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾರೆ. ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗೊಂಡಿರುವ ಭೀಮಾಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಾಳುವಿನ ಹೇಳಿಕೆಯ ಆಧಾರದಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿತೆಯ ಹುಡುಕಾಟ ನಡೆಸುತ್ತಿದ್ದಾರೆ.