ಅಖಿಲ್ ಅಕ್ಕಿನೇನಿಯಿಂದ ಊರ್ವಶಿ ರೌಟೇಲಾಗೆ ಕಿರುಕುಳ : ನಟಿಯ ಪ್ರತಿಕ್ರಿಯೆ ಹೀಗಿದೆ




ಹೈದರಾಬಾದ್: ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ನಿಗೂಢ ಪೋಸ್ಟ್‌ಗಳ ಮೂಲಕ ಸಾಮಾಜಿಕ  ಜಾಲತಾಣಗಳಲ್ಲಿ ಸದ್ದು ಮಾಡಲು ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಆದರೆ ಇದೀಗ ಅವರು, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಉಮೈರ್ ಸಂಧು ವಿರುದ್ಧ ಕಿಡಿಕಾರಿ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟ ಹಾಗೂ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಯವರಿಂದ ಊರ್ವಶಿ ರೌಟೇಲಾ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಉಮೈರ್ ಹೇಳಿಕೆಯ ವಿರುದ್ಧ ಅವರು ಸಾಮಾಜಿಕ ಜಾಲತಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಊರ್ವಶಿ ಅವರು ಉಮೈರ್ ಸಂಧು ಪೋಸ್ಟಿಸಿರುವ ಟ್ವಿಟ್‌ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಉಮೈರ್ ಸಂಧು ಮಾಡಿದ್ದ ಟ್ವಿಟ್‌ನಲ್ಲಿ "ಅಖಿಲ್ ಅಕ್ಕಿನೇನಿ ಯುರೋಪ್‌ನಲ್ಲಿ 'ಏಜೆಂಟ್' ಸಿನಿಮಾದ ಐಟಂ ಸಾಂಗ್ ಶೂಟಿಂಗ್‌ನಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾರಿಗೆ ಕಿರುಕುಳ ನೀಡಿದ್ದಾರೆ. ಆದರೆ ಊರ್ವಶಿ ರೌಟೇಲಾ ಪ್ರಕಾರ, ಅಖಿಲ್ ಅಕ್ಕಿನೇನಿ ಬಹಳ ಅಪಕ್ವವಾದ ನಟರಾಗಿದ್ದು ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಬರೆದುಕೊಂಡಿದ್ದರು.


ಆದರೆ ಊರ್ವಶಿ ರೌಟೇಲಾ ಅವರು ಉಮೈರ್ ಸಂಧು ಹೇಳಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಜೊತೆಗೆ ಆತನ ಟ್ವಿಟ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಫೇಕ್' ಎಂದು ಕರೆದಿದ್ದಾರೆ. 

ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಈ ಬಗ್ಗೆ ಬರೆದಿರುವ ಅವರು 'ನನ್ನ ಕಾನೂನು ತಂಡ, ಉಮೈರ್ ಸಂಧುಗೆ ಲೀಗಲ್ ನೋಟಿಸ್ ನೀಡಿದೆ. ನಿಮ್ಮ ನಕಲಿ ಹಾಗೂ ಹಾಸ್ಯಾಸ್ಪದ ಟ್ವಿಟ್‌ನಿಂದ ತಾನು ಅಸಮಾಧಾನಗೊಂಡಿದ್ದೇನೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ನೀವು ಬಹಳ ಅಪ್ರಬುದ್ಧ ರೀತಿಯ ಪತ್ರಕರ್ತರಾಗಿದ್ದು ನಾನು ಮತ್ತು ನನ್ನ ಕುಟುಂಬ ಇದರಿಂದ ಮುಜುಗರಕ್ಕೆ ಈಡಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.