ಅಂಕೋಲಾ: ಉಪನ್ಯಾಸಕಿಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಟ್ಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮನೆಯವರು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿಯ ಎಸ್. ಕೆ.ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದ ಅಂಗಡಿಬೈಲ್ ನಾಕಮನೆ ನಿವಾಸಿ ನಿವೇದಿತಾ ನರಸಿಂಹ ಭಟ್ಟ (24) ಮೃತ ದುರ್ದೈವಿ.
ಮೈಸೂರು ವಿಶ್ವವಿದ್ಯಾಲಯದಿಂದ ಬಂಗಾರದ ಪದಕದೊಂದಿಗೆ ಎಂ.ಎಸ್ಸಿಯಲ್ಲಿ ಪದವಿ ಪಡೆದಿದ್ದರು. ಇವರು ಕಳೆದ ಎರಡು ವರ್ಷಗಳಿಂದ ಹುಣಸಗಿಯಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಜೂನ್ ತಿಂಗಳಲ್ಲಿ ಐ ಎ ಎಸ್ ಬರೆಯಲು ತಯಾರಿ ನಡೆಸುತ್ತಿದ್ದರು. ನಿವೇದಿತಾ ಮೃತ ಪಟ್ಟಿರುವುದಾಗಿ ಅವರ ತಂದೆಗೆ ದೂರವಾಣಿ ಕರೆ ಮಾಡಿ ತಿಳಿಸಲಾಗಿತ್ತು.
ಆ ಬಳಿಕ ಸುಮಾರು ಹತ್ತಿಪ್ಪತ್ತು ಮಂದಿ ಟ್ರಾಕ್ಸ್ ವಾಹನದಲ್ಲಿ ಮೃತದೇಹವನ್ನು ಅಂಗಡಿಬೈಲಿಗೆ ತಂದು ಮನೆಯವರಿಗೆ ಒಪ್ಪಿಸಿದ್ದರು. ಈ ವೇಳೆ ಸಾವಿನ ಕುರಿತಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿರುವುದ್ದರು. ಈ ಹಿನ್ನೆಲೆಯಲ್ಲಿ ಸಂಶಯಗೊಂಡು ಇದೊಂದು ಅಸಹಜ ಸಾವಾಗಿದ್ದು ತನಿಖೆ ನಡೆಸುವಂತೆ ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.
ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.