ಡ್ರೆಸ್ಸಿಂಗ್ ರೂಂನಲ್ಲಿ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಖಾಸಗಿ ಅಂಗವನ್ನು ಸ್ಪರ್ಶಿಸಿದ: ಕಹಿ ಅನುಭವ ಬಿಚ್ಚಿಟ್ಟ ನಟಿ ಮಾಳವಿಕಾ ಶ್ರೀನಾಥ್


ಕೊಚ್ಚಿ: ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ನಟಿಯರು ತಮ್ಮ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮಗೆ ಸಹಕರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಮಾಲಿವುಡ್ ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್‌ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಕೆಲ ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮಲಯಾಳಂ ನಟಿ ಮಾಳವಿಕಾ ಶ್ರೀನಾಥ್ ಸೇರಿಕೊಂಡಿದ್ದಾರೆ.

ನಟಿ ಮಾಳವಿಕಾ ಶ್ರೀನಾಥ್ ಮಧುರಂ ಮತ್ತು ಸ್ಯಾಟರ್ಡೆ ನೈಟ್ ಸಿನಿಮಾಗಳ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದಾರೆ. ಈ ನಟಿಯೀಗ ಸಿನಿಮಾ ಆಡಿಷನ್‌ಗೆ ಕರೆದ ವೇಳೆ ತಾವು ಅನುಭವಿಸಿರುವ ಕಾಸ್ಟಿಂಗ್ ಕೌಚ್ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಳವಿಕಾ, ಮಂಜು ವಾರಿಯರ್ ಪುತ್ರಿಯ ಪಾತ್ರದಲ್ಲಿ ನಟಿಸಲು ಬಯಸುವುದಾದರೆ ನಮ್ಮೊಂದಿಗೆ ಸ್ವಲ್ಪ ಸಹಕರಿಸಬೇಕೆಂದು ಅವರು ಆಫರ್ ಮಾಡಿದರು ಎಂದು ಮಾಳವಿಕಾ ತಿಳಿಸಿದರು.

ಇದು 3 ವರ್ಷಗಳ ಹಿಂದೆ ನಡೆದಿರುವ ಘಟನೆ. ಮಂಜು ವಾರಿಯರ್ ಪುತ್ರಿಯ ಪಾತ್ರಕ್ಕಾಗಿ ತನ್ನನ್ನು ಆಡಿಷನ್‌ಗೆ ಕರೆಯಲಾಗಿತ್ತು. ಈ ವೇಳೆ ನನಗೆ ಸಿನಿಮಾ ಸಂಪರ್ಕ ಇರಲಿಲ್ಲ. ಆಡಿಷನ್ ಕರೆ ನಿಜವೋ? ಅಥವಾ ಅಲ್ಲವೋ? ನನಗೆ ತಿಳಿದಿರಲಿಲ್ಲ. ಆದರೆ, ನಾನು ಆಡಿಷನ್‌ಗೆ ಹೋಗಲು ಒಪ್ಪಿಕೊಂಡೆ. ಅವರು ಮನೆಗೆ ಇನ್ನೋವಾ ಕಾರನ್ನು ಕಳುಹಿಸಿದರು. ನಾನು ನನ್ನ ತಾಯಿ ಮತ್ತು ಸಹೋದರಿಯೊಂದಿಗೆ ಹೊರಟೆ. ಆಡಿಷನ್ ಎಲ್ಲೋ ತ್ರಿಶ್ಶೂರಿನಲ್ಲಿತ್ತು.

ಆಡಿಷನ್ ಸ್ಥಳ ತಲುಪಿದ ಅರ್ಧ ಗಂಟೆಯ ಬಳಿಕ ವ್ಯಕ್ತಿಯೋರ್ವನು ತನಗೆ ಡ್ರೆಸ್ಸಿಂಗ್ ರೂಮ್‌ಗೆ ಹೋಗಲು ಹೇಳಿದರು. ಪ್ರಯಾಣ ಮಾಡಿದ್ದರಿಂದ ನಿಮ್ಮ ಕೂದಲು ಅಸ್ತವ್ಯಸ್ತವಾಗಿದ್ದು, ಸರಿಮಾಡಿಕೊಂಡು ಬನ್ನಿ ಎಂದರು. ನಾನು ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುವಾಗ ಆತ ತನ್ನನ್ನು ತಬ್ಬಿಕೊಂಡು ಖಾಸಗಿ ಅಂಗಗಳನ್ನು ಮುಟ್ಟಿದ. ಅವಕಾಶ ಬೇಕಾದರೆ ನನ್ನೊಂದಿಗೆ ಸಹಕರಿಸು. ನನಗೆ 10 ನಿಮಿಷ ಸಾಕು ಎಂದನು. ಈ ವೇಳೆ ನನ್ನ ತಾಯಿ ಮತ್ತು ಸಹೋದರಿ ನನಗಾಗಿ ಹೊರಗೆ ಕಾಯುತ್ತಿದ್ದರು. ನಾನು ಅಳಲು ಪ್ರಾರಂಭಿಸಿದೆ ಮತ್ತು ಅವನ ಕ್ಯಾಮೆರಾವನ್ನು ಕೆಡವಲು ಪ್ರಯತ್ನಿಸಿದೆ. ಅವರ ಗಮನ ಕ್ಯಾಮರಾ ಕಡೆ ತಿರುಗುವಷ್ಟರಲ್ಲಿ ನಾನು ತಪ್ಪಿಸಿಕೊಂಡೆ ಎಂದು ಮಾಳವಿಕಾ ಹೇಳಿದರು.