ನೀಲಗಿರಿ: ಲಾರಿ ಚಾಲಕನೋರ್ವನ ಸಮಯ ಪ್ರಜ್ಞೆಯಿಂದ ಬೈಕ್ ಸವಾರರಿಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುರುವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಂಡ್ಲುಪೇಟೆ ಮಾರ್ಗದ ಮೈಸೂರು-ಊಟಿ ರಸ್ತೆಯಲ್ಲಿ ಮಧುಮಲೈನಲ್ಲಿ ನಡೆದಿದೆ.
ವೀಡಿಯೋದಲ್ಲಿ ಆನೆ ಲಾರಿಯತ್ತ ಸಾಗುತ್ತಿರುವ ದೃಶ್ಯವಿದೆ. ಲಾರಿಯ ಬಲಭಾಗದಲ್ಲಿ ಆನೆಯಿದ್ದರೆ, ಎಡಭಾಗದಲ್ಲಿ ಬೈಕ್ ಸವಾರರಿದ್ದಾರೆ. ಕಾಡಾನೆ ಬೈಕ್ ಸವಾರರ ಮೇಲೆ ಕಣ್ಣಿಟ್ಟಿದೆ, ಅವರ ಮೇಲೆ ದಾಳಿ ಮಾಡುತ್ತದೆ ಎಂಬುದನ್ನು ಗಮನಿಸಿದ ತಕ್ಷಣ ಲಾರಿ ಚಾಲಕ ಬಾಗಿಲು ತೆರೆದು ಲಾರಿ ಹತ್ತುವಂತೆ ಹೇಳುತ್ತಾನೆ. ಅಷ್ಟರಲ್ಲಿಯೇ ಆನೆ ಇನ್ನೊಂದು ಬದಿಗೆ ಬಂದಿದೆ. ಆದರೆ ಬೈಕ್ ಸವಾರ ಯುವಕರಿಬ್ಬರು ಲಾರಿಯೊಳಗೆ ಹತ್ತಿದ್ದರಿಂದ ಪಾರಾಗಿದ್ದಾರೆ.
ಆನೆ ಸ್ವಲ್ಪ ಸಮಯ ಅಲ್ಲಿಯೇ ಉಳಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಲಾರಿ ಹಿಂದಿದ್ದ ವಾಹನ ಸವಾರರು ಈ ವೀಡಿಯೋ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಾರಿ ಚಾಲಕನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.