ಮಂಗಳೂರು: ಮಕ್ಕಳಿಬ್ಬರನ್ನು ನೇಣು ಹಾಕಿ ತಾಯಿ ಆತ್ಮಹತ್ಯೆ- ಇಬ್ಬರು ಸಾವು, ಒಬ್ಬಳು ಪಾರು
Wednesday, March 1, 2023
ಮಂಗಳೂರು: ಮಕ್ಕಳಿಬ್ಬರನ್ನು ಕುಣಿಕೆಗೆ ಹಾಕಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಮಂಗಳೂರಿನ ಕೊಡಿಯಾಲ ಗುತ್ತುವಿನಲ್ಲಿ ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ನಾಲ್ಕು ವರ್ಷದ ಮಗು ಮೃತಪಟ್ಟಿದ್ದಾರೆ. 12ರ ಬಾಲಕಿ ಪಾರಾಗಿದ್ದಾಳೆ.
ಕೊಡಿಯಾಲ ಗುತ್ತಿನ ವಿಜಯಾ(33), ಸುಮುಖ(4) ಸಾವನ್ನಪ್ಪಿದವರು. ಯಜ್ಞಾ ಎಂಬ 12 ವರ್ಷದ ಬಾಲಕಿ ಸಾವಿನಿಂದ ಪಾರಾಗಿದ್ದಾಳೆ.
ವಿಜಯಾ ತನ್ನಿಬ್ಬರು ಮಕ್ಕಳನ್ನು ನೇಣು ಹಾಕಿ ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಲ್ಲಿ 4 ವರ್ಷದ ಸುಮುಖ ಸಾವಿಗೀಡಾಗಿದ್ದಾರೆ. ಯಜ್ಞ ಎಂಬ 12 ವರ್ಷದ ಬಾಲಕಿ ತಾಯಿ ನೇಣಿಗೆ ಒಡ್ಡಿದರೂ ಪಾರಾಗಿದ್ದಾಳೆ. ಈಕೆಯನ್ನು ನೇಣಿಗೆ ಹಾಕಿದಾಗ ಈಕೆಯ ಕಾಲಡಿಗೆ ಟೇಬಲ್ ತಾಗಿರುವ ಪರಿಣಾಮ ಆಕೆ ಪಾರಾಗಿದ್ದಾಳೆ. ಬಳಿಕ ಆಕೆ ತನ್ನ ನೇಣು ಬಿಡಿಸಿಕೊಂಡ ಆಕೆ ಮನೆಯಿಂದ ಹೊರಬಂದು ಸ್ಥಳೀಯರಿಗೆ ತಿಳಿಸಿದ್ದಾಳೆ. ಅವರು ತಕ್ಷಣ ಬಂದು ನೋಡಿದರೂ ವಿಜಯ ಮತ್ತು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ಅವರಿಗೆ ಎರಡು ಮದುವೆಯಾಗಿತ್ತು. ಮೊದಲ ಮದುವೆಯಾದ ಬಳಿಕ ಪತಿ ಸಾವನ್ನಪ್ಪಿದ್ದರು. ನೇಣಿನಿಂದ ಪಾರಾದ ಯಜ್ಞ ಅವರ ಮಗಳು. ಆ ಬಳಿಕ ಆರೇಳು ವರ್ಷದ ಹಿಂದೆ ವಿಜಯ ಅವರಿಗೆ ಎರಡನೇ ಮದುವೆಯಾಗಿತ್ತು. ಕೆಲ ತಿಂಗಳ ಹಿಂದೆ ಎರಡನೇ ಪತಿಯೂ ಸಾವನ್ನಪ್ಪಿದ್ದರು. ವಿಜಯ ಅವರು ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.