ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ - ಪರಾರಿಯಾಗಲೆತ್ನಿಸಿದ ಹಂತಕ ಅರೆಸ್ಟ್
Wednesday, March 8, 2023
ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳವೊಂದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯ ಬಳಿಕ ಪರಾರಿಯಾಗಲೆತ್ನಿಸಿದ ಹಂತಕನನ್ನು ಬಜ್ಪೆ ಪೊಲೀಸರು ಪ್ರಕರಣ ನಡೆದ 24 ಗಂಟೆಗಳೊಳಗೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಬಸೈಕುರ್ದ್ ನಿವಾಸಿ ಸೋಹನ್ ಯಾದವ್(19) ಬಂಧಿತ ಆರೋಪಿ.
ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಾದ ಸಂಜಯ್ ಮತ್ತು ಸೊಹಾನ್ ಯಾದವ್ ನಡುವೆ ಮರವೂರು ಗ್ರಾಮದ ಕೊಸ್ಟಲ್ ಗಾರ್ಡ್ ಸೈಟ್ ನಲ್ಲಿ ಮಾ.5ರಂದು ರಾತ್ರಿ 8.30 ಗಂಟೆಗೆ ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ಸೊಹನ್ ಯಾದವನು ಸಂಜಯ್ ನನ್ನು ಬಲವಾಗಿ ನೆಲಕ್ಕೆ ದೂಡಿದ್ದಾನೆ. ಪರಿಣಾಮ ಸಂಜಯ್ ಹಿಮ್ಮುಖವಾಗಿ ಬಿದ್ದ ಪರಿಣಾಮ ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ತಕ್ಷಣ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಸಂಜಯ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಘಟನೆಯ ಬಳಿಕ ಆರೋಪಿ ಸೋಹನ್ ಯಾದವ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದರು. ಆದರೆ ಆರೋಪಿ ಮಾ.7 ರಂದು ಮಧ್ಯಾಹ್ನ 1ಗಂಟೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಮಂಗಳೂರು ರೈಲ್ವೇ ನಿಲ್ದಾಣದ ಬಳಿ ಆತನನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.