ಉತ್ತರಪ್ರದೇಶ: ತನ್ನ ಪುತ್ರನ ಮಾನಸಿಕ ಅಸ್ವಸ್ಥತೆಯನ್ನು ಸರಿಪಡಿಸಲು 10 ವರ್ಷದ ಬಾಲಕನನ್ನು ನರ ಬಲಿ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಂತ್ರವಾದಿಯೊಬ್ಬನ ಮಾತಿನಂತೆ 10 ಮೂವರು ಈ ಬಾಲಕನನ್ನು ನರಬಲಿ ನೀಡಿದ್ದಾರೆ.
ಉತ್ತರಪ್ರದೇಶದ ಬಹ್ರೈಚ್‌ನ ಪರ್ಸಾ ಗ್ರಾಮದ ನಿವಾಸಿಯಾ ಬಾಲಕ ಗುರುವಾರ ರಾತ್ರಿ ನಾಪತ್ತೆಯಾಗಿದ್ದು, ಅದೇ ರಾತ್ರಿ ಆತ ಮೃತದೇಹವಾಗಿ ಪತ್ತೆಯಾಗಿದ್ದ. ಪೊಲೀಸರು ಘಟನೆಯ ಬೆನ್ನುಹತ್ತಿ ಹೋದಾಗ ಬಾಲಕನ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.
ಈ ಬಾಲಕನ ಸೋದರ ಸಂಬಂಧಿ ಅನೂಪ್ ಹಾಗೂ ಇನ್ನಿಬ್ಬರಾದ ವಿವೇಕ್ ಹಾಗೂ ಚಿರಂತ್ ರಾಮ್ ಸೇರಿ ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅನೂಪ್‌ಗೆ ಎರಡೂವರೆ ವರ್ಷದ ಪುತ್ರನಿದ್ದ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಆತನಿಗೆ ನೀಡಿದ ಚಿಕಿತ್ಸೆ ಸಕಾರಾತ್ಮಕವಾಗಿ ಫಲಿತಾಂಶ ನೀಡದಿದ್ದಾಗ, ಅನೂಪ್ ತನ್ನ ಹಳ್ಳಿಯ ಸಮೀಪವಿರುವ ಮಂತ್ರವಾದಿಯನ್ನು ಸಂಪರ್ಕಿಸಿದ್ದಾನೆ.
ಆತ ಅನೂಪ್‌ನಿಗೆ ನರಬಲಿ ನೀಡಿದ್ದಲ್ಲಿ ಪುತ್ರ ಸರಿಯಾಗುತ್ತಾನೆಂದು ನರಬಲಿಗೆ ಪ್ರೇರೇಪಿಸಿದ್ದಾನೆ. ಆದ್ದರಿಂದ ಆತ ಬಾಲಕನನ್ನು ಅಪಹರಿಸಿ ತನ್ನ ಸಹಚರರೊಡಗೂಡಿ ಗುದ್ದಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಾದ ಅನೂಪ್, ಚಿಂತಾರಾಮ್ ಮತ್ತು ವಿವೇಕ್ ನನ್ನು ಶನಿವಾರ ಬಂಧಿಸಲಾಗಿದ್ದು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.