ಅಸ್ಸಾಂ ಮೂಲದ ಕಾರ್ಮಿಕನಿಗೆ ಹೊಡೆಯಿತು ಬಂಪರ್ ಲಾಟರಿ: ನಟನ ಮನೆಯಲ್ಲಿ ಕೆಲಸಕ್ಕಿದ್ದಾತ ಬಹುಮಾನವಾಗಿ ಗೆದ್ದಿದ್ದು ಬರೋಬ್ಬರಿ 10 ಕೋಟಿ ರೂ.
Tuesday, March 21, 2023
ತಿರುವನಂತಪುರಂ: ಮಲಯಾಳಂ ಸಿನಿಮಾ ನಟರೋರ್ವರ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕ ಕೇರಳ ರಾಜ್ಯದ ಸಮ್ಮರ್ ಬಂಪರ್ ಲಾಟರಿ ಹೊಡೆದಿದ್ದು, ಆತ 10ಕೋಟಿ ರೂ. ಬಹುಮಾನವಾಗಿ ಗೆದ್ದಿದ್ದಾನೆ.
ಅಸ್ಸಾಂ ಮೂಲದ ಆಲ್ಬರ್ಟ್ ಟಿಗಾ ಎಂಬ ಕಾರ್ಮಿಕನೇ 10 ಕೋಟಿ ರೂ. ಹಣ ಬಹುಮಾನವಾಗಿ ಗೆದ್ದ ಅದೃಷ್ಟವಂತ. 'ಒರು ಮುತ್ತಪ್ಪಿ ಗಧಾ' ಖ್ಯಾತಿಯ ನಟ ರಜಿನಿ ಚಾಂಡಿ ಮನೆಯಲ್ಲಿ ಆಲ್ಬರ್ಟ್ ಟಿಗಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಇದೀಗ ತೆರಿಗೆ ಕಡಿತಗೊಂಡು ಟಿಗಾ ಅವರಿಗೆ 6.6 ಕೋಟಿ ರೂ. ದೊರೆಯಲಿದೆ. ಇತ್ತೀಚೆಗೆ ಕೋಲ್ಕತ್ತಾ ಮೂಲದ ಮತ್ತೊಬ್ಬ ವಲಸೆ ಕಾರ್ಮಿಕ ಇಡುಕ್ಕಿ ಜಿಲ್ಲೆಯಲ್ಲಿ 75 ಲಕ್ಷ ರೂ. ಮೌಲ್ಯದ ಲಾಟರಿ ಗೆದ್ದಿದ್ದ. ಆನಂತರ ಯಾರೋ ಟಿಕೆಟ್ ಕಿತ್ತುಕೊಳ್ಳುತ್ತಾರೆಂದು ಹೆದರಿ ಪೊಲೀಸರ ಮೊರೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು.
ಈ ಬಾರಿಯ ಸಮ್ಮರ್ ಬಂಪರ್ ಲಾಟರಿಯಲ್ಲಿ ಎರಡನೇ ಬಹುಮಾನ ಮತ್ತು ಮೂರನೇ ಬಹುಮಾನ ಪಡೆದ ವಿಜೇತರು ಕ್ರಮವಾಗಿ 50 ಲಕ್ಷ ಮತ್ತು 5 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.