ಹಾಡಹಗಲೇ ಗುಂಡಿನ ದಾಳಿಗೆ ಬೈಕ್ ಸವಾರ ಯುವಕರಿಬ್ಬರು ಬಲಿ



ಚಿಕ್ಕಮಗಳೂರು: ಹಾಡಹಗಲೇ ಬೈಕ್ ಸವಾರರಿಬ್ಬರನ್ನು  ಗುಂಡಿಕ್ಕಿ ಕೊಲೆಗೈದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೆಹೊನ್ನೂರು ಸಮೀಪದ ಚಂದ್ರುಳ್ಳಿಬಿದರೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಬಾಳೆಹೊನ್ನೂರು ಗ್ರಾಮದ ಹಳ್ಳಿಬೈಲು ನಿವಾಸಿಗಳಾದ ಪ್ರಕಾಶ್(28) ಮತ್ತು ಪ್ರವೀಣ್(30) ಹತ್ಯೆಯಾದ ದುರ್ದೈವಿಗಳು. ಚಿಕ್ಕಮಗಳೂರು ತಾಲೂಕಿನ ಉಜ್ಜಯಿನಿ ಗ್ರಾಮದ ರಮೇಶ್ ಕೊಲೆ ಆರೋಪಿ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೃತ್ಯಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಆಗಮಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.