-->
ಸದಭಿರುಚಿಯ ಸಿನಿಮಾ ಮೂಲಕ ಕನ್ನಡದ ಬೆಳ್ಳಿತೆರೆ ಬೆಳಗಿದ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ

ಸದಭಿರುಚಿಯ ಸಿನಿಮಾ ಮೂಲಕ ಕನ್ನಡದ ಬೆಳ್ಳಿತೆರೆ ಬೆಳಗಿದ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ


ಬೆಂಗಳೂರು: ಕಸ್ತೂರಿ ನಿವಾಸ, ಎರಡು ಕನಸು, ಚಂದನದ ಗೊಂಬೆಯಂತಹ ಸಿನಿಮಾಗಳನ್ನು ಕನ್ನಡದ ಹಿರಿತೆರೆಗೆ ನೀಡಿದ ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್(90) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತಿದೆ. ಅತೀ ಹೆಚ್ಚು ಜನಪ್ರಿಯ, ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ದೊರೈ-ಭಗವಾನ್ ಜೋಡಿಯದ್ದು. ದೊರೈರಾಜ್ ಅವರು 2000ರಲ್ಲಿ ನಿಧನರಾಗಿದ್ದರು. ಈ ಜೋಡಿ ಜತೆಯಾಗಿ ಸುಮಾರು 27 ಸಿನಿಮಾಗಳನ್ನು ನಿರ್ದೇಶಿಸಿತ್ತು. ಡಾ.ರಾಜಕುಮಾರ್‌ ಕ್ಯಾಂಪ್ ನಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಿದ್ದ ಈ ಜೋಡಿ, ಅಣ್ಣಾವ್ರಿಗೆ ಅತೀ ಹೆಚ್ಚು ಸಿನೆಮಾಗಳನ್ನ ನಿರ್ದೇಶನ ಮಾಡಿತ್ತು. ಈ ಪೈಕಿ ಬಹುತೇಕ ಸಿನೆಮಾಗಳು ಹಿಟ್ ಆಗಿವೆ.

1968ರಲ್ಲಿ ಜೇಡರ ಬಲೆ ಎಂಬ ಬಾಂಡ್ ಶೈಲಿಯ ಪತ್ತೇದಾರಿ ಸಿನಿಮಾದ ಮೂಲಕ ದೊರೈ - ಭಗವಾನ್ ಜೋಡಿ ಜತೆಯಾಯಿತು. ಆ ಬಳಿಕ ರಾಜ್ ಕುಮಾರ್ ಅವರಿಗೆ ಕಸ್ತೂರಿ ನಿವಾಸ, ಎರಡು ಕನಸು, ಗಿರಿಕನ್ಯೆ, ನಾನೊಬ್ಬ ಕಳ್ಳ, ಸಮಯದ ಗೊಂಬೆ, ಜೀವನ ಚೈತ್ರ, ವಸಂತ ಗೀತ,  ಹೊಸಬೆಳಕು, ಒಡಹುಟ್ಟಿದವರು, ಆಪರೇಷನ್ ಡೈಮಂಡ್ ರಾಕೆಟ್, ಮುಂತಾದ ಯಶಸ್ವಿ ಸಿನಿಮಾವನ್ನು ನೀಡಿತ್ತು. ಅಲ್ಲದೆ ಅನಂತ್ ನಾಗ್ - ಲಕ್ಷ್ಮೀ ಜೋಡಿಗಾಗಿ ಚಂದನದ ಗೊಂಬೆ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ ಮುಂತಾದ ಸಿನಿಮಾಗಳಲ್ಲದೆ, ಬಯಲು ದಾರಿ, ಮುನಿಯನ ಮಾದರಿ, ನೀನು ನಕ್ಕರೆ ಹಾಲು ಸಕ್ಕರೆ, ಗಾಳಿಮಾತು ಹೀಗೆ ಸಾಕಷ್ಟು ಸಿನೆಮಾಗಳಿಗೆ ದೊರೈ - ಭಗವಾನ್ ಜೋಡಿಯಾಗಿ ನಿರ್ದೇಶನ ಮಾಡಿದ್ದಾರೆ. ಇವಲ್ಲಿ ಹೆಚ್ಚಿನವು ಕನ್ನಡದ ಕಾದಂಬರಿ ಆಧಾರಿತ ಸಿನಿಮಾಗಳು ಎಂಬುದು ಇನ್ನೊಂದು ಹೆಗ್ಗಳಿಕೆ. ಎಸ್.ಕೆ.ಭಗವಾನ್ ಒಬ್ಬರೇ ಮಾಂಗಲ್ಯ ಬಂಧನ(1993) ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article