ಶಿಕ್ಷಣ ಸಂಸ್ಥೆಯೊಂದರಲ್ಲಿ ಏಕಕಾಲದಲ್ಲಿ ಅತಿಹೆಚ್ಚು ಮಂದಿ ಯೋಗಾಭ್ಯಾಸ ಯೋಗಥಾನ್: ಆಳ್ವಾಸ್ ದಾಖಲೆ

 


ವಿದ್ಯಾಗಿರಿ:  ಸ್ವಾತಂತ್ರ‍್ಯದ 75ನೇ ವಾರ್ಷಿಕೋತ್ಸವ ಸಂಭ್ರಮದ ಸವಿನೆನಪಿಗಾಗಿ ಜ.15ರಂದು ರಾಜ್ಯಾದ್ಯಂತ ನಡೆದ ಯೋಗಥಾನ್‌ನಲ್ಲಿ ಶಿಕ್ಷಣ ಸಂಸ್ಥೆಯೊAದರಲ್ಲಿ ಅತಿ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದ ದಾಖಲೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಪಾತ್ರವಾಗಿದೆ. 

ರಾಜ್ಯದಾದ್ಯಂತ ಜನವರಿ 15ರಂದು ನಡೆದ ಯೋಗಥಾನ್‌ನಲ್ಲಿ ಏಕಕಾಲದಲ್ಲಿ 4,05,255 ಮಂದಿ ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿತ್ತು.  ಅಂದು ರಾಜ್ಯದಲ್ಲೇ ಶಿಕ್ಷಣ ಸಂಸ್ಥೆಯೊAದರಲ್ಲಿ ಅತಿಹೆಚ್ಚು ಮಂದಿ (31,986) ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗಾಭ್ಯಾಸ ಮಾಡಿದ್ದರು. ದ್ವಿತೀಯ ಸ್ಥಾನವನ್ನು ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಪಡೆದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಪ್ರಕಟಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ. 

ಆಳ್ವಾಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಅಂದು ಏಕಕಾಲದಲ್ಲಿ ಯೋಗಾಭ್ಯಾಸ ಮಾಡಲಾಗಿತ್ತು.  ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸ್ವತಃ ಯೋಗಾಭ್ಯಾಸ ಮಾಡುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದ್ದರು. 

ಅತಿಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದ ಜಿಲ್ಲೆಗಳ ಪೈಕಿ ಬೆಳಗಾವಿ (49,626), ಮೈಸೂರು (41,044) ಹಾಗೂ ವಿಜಯಪುರ (36,644) ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. 

ಭಾರತ ಸ್ವಾತಂತ್ರ‍್ಯದ 75ನೇ ವಾರ್ಷಿಕೋತ್ಸವ ಸಂಭ್ರಮದ (ಆಜಾದಿ ಕಾ ಅಮೃತ ಮಹೋತ್ಸವ) ಸವಿನೆನಪಿಗಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಯೋಗಥಾನ್ ಹಮ್ಮಿಕೊಂಡಿತ್ತು.