ಮಂಗಳೂರು: ಮಗುವಿನ ಮುಗ್ಧ ಮನಸ್ಸಿಗೆ ಮನಸೋತ ದೈವ - ಎಲ್ಲರ ಸ್ಟೇಟಸ್ ನಲ್ಲೂ ರಾರಾಜಿಸಿತು ವೀಡಿಯೋ


ಮಂಗಳೂರು: ದೈವಕ್ಕೇ ಸ್ವೀಟ್ಸ್ ಕಾರ್ನ್ ನೀಡಿ ದೈವದ ಹೃದಯವನ್ನು ಮಾತ್ರವಲ್ಲ, ಕರಾವಳಿಯ ದೈವ ಭಕ್ತರ ಮನಗೆದ್ದ ಮಗುವಿನ ವೀಡಿಯೊವೊಂದು ನಿನ್ನೆಯಿಂದ ಎಲ್ಲರ ಸ್ಟೇಟಸ್ ನಲ್ಲೂ ರಾರಾಜಿಸುತ್ತಿದೆ. ‌ಹಾಗಾದರೆ ಆ ಮಗು ಯಾರು, ಎಲ್ಲಿಯ ಘಟನೆ ಎಂಬ ಕುತೂಹಲ ನಿಮಗಿದೆಯೇ ಹಾಗಾದರೆ ಈ ಸುದ್ದಿ ನೋಡಿ...

ಇದು ಗುರುವಾರ ಮಂಗಳೂರಿನ ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ದೊಂಪದಬಲಿ ಸೇವೆಯ ವೇಳೆ ಘಟಿಸಿದ ದೃಶ್ಯ. ರಾತ್ರಿ ಸುಮಾರು 11ಗಂಟೆ ಸುಮಾರಿಗೆ ಕಾಂತೇರಿ ಜುಮಾದಿ ದೈವದ ನೇಮದ ನರ್ತನ ಸೇವೆ ನಡೆಯುತ್ತಿತ್ತು. ನೇಮದಲ್ಲಿ ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ ಬಿಂಬಿಸುತ್ತಿತ್ತು. ಈ ವೇಳೆ ಅಲ್ಲಿಯೇ ನೆಲದಲ್ಲಿ ಕುಳಿತು ಮಗುವೊಂದು ಸ್ವೀಟ್ ಕಾರ್ನ್ ತಿನ್ನುತ್ತಾ ನೇಮ ವೀಕ್ಷಿಸುತ್ತಿತ್ತು. ನೇರ ಅಲ್ಲಿಗೆ ಬಂದ ಕಾಂತೇರಿ ಜುಮಾದಿ ದೈವ ತನಗೂ ತಿನಿಸು ಕೊಡುವಂತೆ ಕೈ ಚಾಚಿದೆ.





ಮಗು ಒಂದು ಸಲ ದೈವವನ್ನು ನೋಡಿ, ಕೊಂಚವೂ ಭೀತಿಗೊಳಗಾಗದೆ ಮುಗ್ಧತೆಯಿಂದ ಚಮಚದಲ್ಲಿ ಸ್ವೀಟ್ ಕಾರ್ನ್ ನೀಡಲೆತ್ನಿಸಿದೆ. ಆದರೆ ಅದು ಕೆಳಗಡೆ ಬಿದ್ದಿದೆ. ಈ ವೇಳೆ ಕಾಂತೇರಿ ಜುಮಾದಿ ದೈವ ನೇಮ ವೀಕ್ಷಣೆ ಮಾಡುವ ಭಕ್ತರತ್ತ ನೋಡಿ 'ತನಗೆ ಹಸಿವಾಗಿದೆ, ಮಗು ಏನೋ ಕೊಡುತ್ತಿದೆ' ಎಂದು ನಟಿಸಿ ತೋರಿಸಿ, ಮತ್ತೆ ಮಗುವಿನತ್ತ ಕೈಯೊಡ್ಡಿದೆ. ಆಗಲೂ ಸ್ವೀಟ್ ಕಾರ್ನ್ ನೀಡಲು ಹೋದ ಮಗುವಿನ ಮುಗ್ಧ ಮನಸ್ಸಿಗೆ ಮನಸೋತ ದೈವ ತನ್ನ ಹಣೆಯ ಬಣ್ಣವನ್ನೇ ಬೆರಳಿನಿಂದ ತೆಗೆದು ಮಗುವಿನ ಹಣೆಗೆ ಆಶೀರ್ವಾದ ಪೂರ್ವಕವಾಗಿ ತಿಲಕವಿರಿಸಿದೆ.

ಈ ಸಂಪೂರ್ಣ ದೃಶ್ಯವು ಅಲ್ಲಿಯೇ ಇದ್ದವರೊಬ್ಬರ ಮೊಬೈಲ್ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ದೈವ ಹಾಗೂ ಮಗುವಿನ ನಡುವೆ ನಡೆದ ಕೇವಲ 25 ಸೆಕೆಂಡುಗಳ ದೃಶ್ಯ ಎಲ್ಲಾ ಕರಾವಳಿಗರ ಹೃದಯವನ್ನೇ ಗೆದ್ದಿದೆ. ಆದ್ದರಿಂದಲೇ ಈ ವೀಡಿಯೋ ನಿನ್ನೆಯಿಂದ ಎಲ್ಲರ ಮೊಬೈಲ್ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿದೆ. ಅಂದ ಹಾಗೆ ಆ ಮಗುವಿನ ಹೆಸರು ಶಮಿತ್. ಎರಡೂವರೆ ವರ್ಷದ ಈ ಬಾಲಕ ಶಕ್ತಿನಗರ, ಪ್ರಶಾಂತಿ ನಗರದ ದೀಪಕ್ ಹಾಗೂ ದೀಪ್ತಿ ದಂಪತಿಯ ಪುತ್ರ.
BREAKING NEWS
Loading latest news...
Join our WhatsApp Channel Powered By : Online Pudu