ಮನೆಯಲ್ಲಿ ಯಾರೂ ಇಲ್ಲದಿದ್ದರೂ ಕಳವಿಗೆ ಬಂದ ಖದೀಮರು ಹೆದರಿ ಓಡಿ ಹೋದರು: ಅಲ್ಲಿ ಆದದ್ದಾರೂ ಏನು?
Wednesday, January 25, 2023
ತಮಿಳುನಾಡು: ಆರು ತಿಂಗಳಿಂದ ಖಾಲಿಯಿದ್ದ ಮನೆಗೆ ನುಗ್ಗಿ ಕಳವಿಗೆ ಯತ್ನಿಸಲು ಬಂದಿದ್ದ ಖದೀಮರ ತಂಡ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಹೆದರಿ ಓಡಿಹೋಗಿರುವ ಪ್ರಸಂಗವೊಂದು ತಮಿಳುನಾಡಿನ ಕೃಷ್ಣಗಿರಿ ಸಮೀಪದ ಗಂಧಿಗುಪ್ಪಂನಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಸಮೀಪದ ಗಂಧಿಗುಪ್ಪಂ ಮೂಲದ ಖಾಸಗಿ ಕಂಪೆನಿ ಉದ್ಯೋಗಿ ಕಾರ್ತಿಯನ್ ಮನೆಯಲ್ಲಿ ಈ ಕಳವು ಯತ್ನ ನಡೆದಿದೆ. ಕಾರ್ತಿಯನ್ ಹೊಸೂರಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಆರು ತಿಂಗಳಿಂದ ಹೊಸೂರಿನಲ್ಲೇ ನೆಲೆಸಿದ್ದರಿಂದ, ಗಂಧಿಗುಪ್ಪಂ ಮನೆ ಖಾಲಿ ಉಳಿದಿತ್ತು. ಹೀಗಾಗಿ ಈ ಕಳವು ಯತ್ನ ನಡೆದಿತ್ತು.
ತಿಂಗಳಾನುಗಟ್ಟಲೆ ಮನೆಯಿಂದ ದೂರ ಇರಬೇಕಾದ ಪರಿಸ್ಥಿತಿ ಇರುವುದರಿಂದ ಕಾರ್ತಿಯನ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮರಾ ಮತ್ತು ಅಲಾರಂ ಕೂಡ ಅಳವಡಿಸಿದ್ದರು. ಆದರೆ ಇತ್ತೀಚೆಗೆ ಇವರ ಮನೆಗೆ ಕಳ್ಳತನಕ್ಕಾಗಿ ಮೂವರು ಕಳ್ಳರು ಬೈಕ್‌ನಲ್ಲಿ ಬಂದಿದ್ದರು. ಕೈಯಲ್ಲಿ ರಾಡ್ ಹಿಡಿದು ಮನೆಯ ಕಾಂಪೌಂಡ್ ಹತ್ತಿ ಒಳಗೂ ಹೋಗಿದ್ದರು.
ಆದರೆ ಈ ವೇಳೆ ಸಿಸಿಟಿವಿಗೆ ಅಳವಡಿಸಿದ್ದ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದೆ. ಅಲ್ಲದೆ ತಕ್ಷಣ ಅದರಲ್ಲಿನ ಅಲಾರಂ ಸೈರನ್ ಆಗಿದೆ. ಅದರ ಶಬ್ದಕ್ಕೆ ಬೆಚ್ಚಿದ ಕಳ್ಳರು ಅಲ್ಲಿಂದ ಹೆದರಿ ಓಡಿಹೋಗಿದ್ದಾರೆ. ಕಳ್ಳರ ಚಲನವಲನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಧಿಕುಪ್ಪಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.