ಮುಂಬೈ: ಭಾರತದ ತಂಡದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಅವರು ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಖಂಡಲಾದಲ್ಲಿರುವ ಸುನಿಲ್ ಶೆಟ್ಟಿಯವರ ಫಾರ್ಮ್ ಹೌಸ್ ನಲ್ಲಿ ಅದ್ದೂರಿಯಾಗಿ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿ ವಿವಾಹ ನೆರವೇರಿತು. ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು. ಕಳೆದ ವರ್ಷದಿಂದ ಸಾರ್ವಜನಿಕವಾಗಿ ಈ ಜೋಡಿ ಕಾಣಲಾರಂಭಿಸಿತು. ಕಳೆದ ವರ್ಷ ಹೊಸ ವರ್ಷದ ಸಂಭ್ರಮದಲ್ಲಿ ಕೆ.ಎಲ್.ರಾಹುಲ್ ಅವರು ಆಥಿಯಾ ಶೆಟ್ಟಿಯರನ್ನು ಪ್ರೀತಿಸುತ್ತಿರುವುದಾಗಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. 
ಈ ಮದುವೆಗೆ ಎರಡೂ ಕಡೆಯ ಕುಟುಂಬದ ಆಪ್ತರನ್ನಷ್ಟೇ ಕರೆಯಲಾಗಿತ್ತು. ಮುಂದೆ ಮುಂಬೈನಲ್ಲಿ ನಡೆಯುವ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿಯವರ ಅದ್ದೂರಿ ಆರತಕ್ಷತೆಗೆ ಕ್ರಿಕೆಟ್, ಸಿನಿಮಾ ತಾರೆಯರು ಹಾಗೂ ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮದುವೆಯ ಸಂಭ್ರದದಲ್ಲಿದ್ದ ಸುನಿಲ್ ಶೆಟ್ಟಿಯವರು ತಾನು ಅಧಿಕೃತವಾಗಿ ಮಾವನಾಗಿದ್ದೇನೆಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಸದ್ಯ ಮದುವೆ ಫೋಟೋಗಳನ್ನು ಆಥಿಯಾ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
 
   
   
   
   
 
 
 
 
 
 
 
 
 
 
 
 
 
 
 
 
 
