ರಸ್ತೆ ಗುಂಡಿ ತಪ್ಪಿಸಲು ಹೋಗಿ ಟ್ರಕ್ ನಡಿ ಬಿದ್ದು ಟೆಕ್ಕಿ ಮೃತ್ಯು


ಚೆನ್ನೈ: ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಟೆಕ್ಕಿ, ಟ್ರಕ್‍ನಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಚೆನ್ನೈನ ಮಧುರವಾಯಲ್ ಬಳಿ ನಡೆದಿದೆ.

ಶೋಭನಾ (22) ಮೃತಪಟ್ಟ ಟೆಕ್ಕಿ. ಶೋಭನಾ ಖಾಸಗಿ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆ ದ್ವಿಚಕ್ರ ವಾಹನದಲ್ಲಿ ನೀಟ್ ಕೋಚಿಂಗ್ ತರಗತಿಗೆ ತನ್ನ ಸಹೋದರನನ್ನು ಬಿಡಲು ತೆರಳಿದ್ದರು. ಈ ವೇಳೆ ಮಧುರವಾಯಲ್ ಬಳಿ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಟ್ರಕ್‍ವೊಂದು ಶೋಭನಾ ಮೇಲೆಯೇ ಹರಿದು ಅವರು ದಾರುಣವಾಗಿ ಮೃತಪಟ್ಟಿದ್ದಾರೆ. ಆದರೆ ಅವರ ಸಹೋದರ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ತಕ್ಷಣ ಪೂನಮಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಶೋಭನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೋರೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್ ಚಾಲಕ ಮೋಹನ್‍ನನ್ನು ಪೊಲೀಸರು ಬಂಧಿಸಿದ್ದಾರೆ.