ಮಂಗಳೂರು: ಲಾಡ್ಜ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿ ಮೃತ್ಯು


ಮಂಗಳೂರು: ನಗರದ ಪಂಪ್ ವೆಲ್ ಬಳಿಯ ಲಾಡ್ಜೊಂದರಲ್ಲಿ ತಂಗಿದ್ದ ಉಪ್ಪಳ ಮೂಲದ ವ್ಯಕ್ತಿಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯ ಕುಂಬಳೆಯ ಉಪ್ಪಳ ಮೂಲದ ಅಬ್ದುಲ್ ಕರೀಂ ಸಿ.ಯು. ಮೃತಪಟ್ಟ ವ್ಯಕ್ತಿ. ಇಂಟರಲಾಕ್ ಫ್ಯಾಕ್ಟರಿ ಹೊಂದಿರುವ ಅಬ್ದುಲ್ ಕರೀಂ ಸಿ.ಯು. ಅವರು ಮಂಗಳೂರಿನ ಪಡೀಲ್ ನಲ್ಲಿ ಸಮಕ್ ಡೈನ್ ಹೊಟೇಲ್ ನಡೆಸುತ್ತಿದ್ದಾರೆ. ನಿತ್ಯ ಉಪ್ಪಳದಿಂದ ಮಂಗಳೂರಿಗೆ ಬರುತ್ತಿದ್ದ ಅವರು ಸೋಮವಾರ ಮಧ್ಯಾಹ್ನದಿಂದ  ಪಂಪ್ ವೆಲ್ ನ ಲಾಡ್ಜ್ ನಲ್ಲಿ ತಂಗಿದ್ದರು.

ಇಂದು ಅವರು ತಂಗಿದ್ದ ಲಾಡ್ಜ್ ಕೊಠಡಿಯೊಳಗಿನಿಂದ ನಿರಂತರ ಮೊಬೈಲ್ ಫೋನ್ ರಿಂಗ್ ಆಗುತ್ತಿದ್ದರೂ ರಿಸೀವ್ ಮಾಡುತ್ತಿರಲಿಲ್ಲ. ಲಾಡ್ಜ್ ಸಿಬ್ಬಂದಿ ಇಂದು ಬೆಳಗ್ಗೆ 11ಗಂಟೆಗೆ ಅದನ್ನು ಗಮನಿಸಿ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಅಬ್ದುಲ್ ಕರೀಂ ಸಿ.ಯು. ಅವರು ನಗ್ನವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆದರೆ ಇವರ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸುತ್ತಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದೆ.



BREAKING NEWS
Loading latest news...
Join our WhatsApp Channel Powered By : Online Pudu