ಎಷ್ಟು ವೇಗವಾಗಿ ಹೋಗ್ತಿದ್ದೇವೆಂದು ತೋರಿಸಿಕೊಳ್ಳಲು ರೆಕಾರ್ಡ್ ಮಾಡುತ್ತಾ ಬೈಕ್ ಅಪಘಾತಕ್ಕೆ ಬಲಿಯಾದ ಇಬ್ಬರು ಯುವಕರು


ಚೆನ್ನೈ: ವಿದ್ಯಾರ್ಥಿಗಳಿಬ್ಬರು ಸ್ಪೀಡಾಗಿ ಬೈಕ್‌ನಲ್ಲಿ ಬೈಕ್ ಚಲಾಯಿಸೋ ಕ್ರೇಝ್ ತಲೆಗೆ ಹತ್ತಿ ಎದುರಿಗೆ ಬಂದಿರುವ ವಾಹನವನ್ನು ತಪ್ಪಿಸುವ ಭರದಲ್ಲಿ ಡಿವೈಡರ್ ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಚೆನ್ನೈನ ತಾರಾಮಣಿ - ವೇಲಚೇರಿ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ ಪ್ರವೀಣ್(19) ಹಾಗೂ ಹರಿಹರನ್(17)  ಸ್ಥಳದಲ್ಲೇ ಸಾವನ್ನಪ್ಪಿದ್ದ ದುರ್ದೈವಿಗಳು.


ಮೃತಪಟ್ಟ ಇಬ್ಬರು ಯುವಕರು ಕೂಡ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ತಿಂಗಳ ಹಿಂದಷ್ಟೇ, ಪ್ರವೀಣ್‌ಗೆ ಆತನ ತಂದೆ ಹೊಸ ಬೈಕ್ ಕೊಡಿಸಿದ್ದರು. ಹೊಸ ಬೈಕ್ ಕೊಂಡ ಖುಷಿಯಲ್ಲಿ ಪ್ರವೀಣ್ ಹಾಗೂ ಹರಿಹರನ್ ಜಾಲಿ ರೈಡ್ ಹೋಗಿದ್ದಾರೆ. ಈ ವೇಳೆ ಬೈಕ್‌ನ ಆಕ್ಸಿಲೇಟರ್ ಏರೋಕೆ ಶುರುವಾಗಿದಡ 20, 30 ಕಿ.ಮೀ. ಪರ್ ಹವರ್‌ನಿಂದ ಶುರುವಾದ ಬೈಕ್ ವೇಗ, 40ಕ್ಕೆ ಏರಿದೆ. ಹಾಗೆಯೇ 50 ಆಯ್ತು. 50 ಇದ್ದಿದ್ದು, 60, 70 ಆಯ್ತು. ನಂತರ ಹಾಗೇ 90 ಕೊನೆಗೆ 100 ಕಿಲೋ ಮೀಟರ್ ವೇಗದಲೂ ಬೈಕ್ ಚಲಿಸೋದಕ್ಕೆ ಶುರುವಾಗಿತ್ತು. ಅದು 114 ಕಿಲೋ ಮೀಟರ್ ವೇಗವಾಗಿ ಹೋಗುವ ವೇಳೆ ಮುಂಭಾಗ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ, ಬೈಕ್ ನಿಯಂತ್ರಣ ತಪ್ಪಿ ಎದುರಿಗಿದ್ದ, ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರವೀಣ್ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಅನ್ನೋ ಮಾಹಿತಿಯೂ ಲಭ್ಯವಾಗಿದೆ. ಹಿಂಬದಿ ಸವಾರನಾಗಿದ್ದ ಹರಿಹರನ್ ಮೊಬೈಲ್‌ನಲ್ಲಿ ಎಷ್ಟು ವೇಗವಾಗಿ ಹೋಗ್ತಿದ್ದೇವೆಂದು ತೋರಿಸಿಕೊಳ್ಳಲು ವಿಡಿಯೋ ರೆಕಾರ್ಡ್  ಮಾಡಿದ್ದಾನೆ. ಆದರೆ ಮುಂದೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ, ಡಿವೈಡರ್ ಗೆ ಗುದ್ದಿ ಸಾವನ್ನಪ್ಪಿದ್ದಾರೆ.