ಮಂಗಳೂರು: ಪಾರ್ಕಿಂಗ್ ಮಾಡಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳೂರು ನಗರದ ಬಲ್ಮಠದ ಜ್ಯೂಸ್ ಜಂಕ್ಷನ್ ಬಳಿ ಇಂದು ನಡೆದಿದೆ.
ಫೋರ್ಡ್ ಕಂಪೆನಿಯ ಕಾರು ಎಸಿಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅವಘಡಕ್ಕೀಡಾಗಿದೆ ಎಂದು ಹೇಳಲಾಗಿದೆ. ಜ್ಯೂಸ್ ಕುಡಿಯಲೆಂದು ಬಂದಿರುವ ಕುಟುಂಬ ಬಲ್ಮಠದಲ್ಲಿ ಕಾರನ್ನು ನಿಲ್ಲಿಸಿತ್ತು. ಆದರೆ ಏಕಾಏಕಿ ಕಾರಿನ ಇಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಇಡೀ ಪರಿಸರದಲ್ಲಿ ಹೊಗೆ ಆವರಿಸಿದೆ.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ದಳ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದೆ. ಈ ಬೆಂಕಿ ಅವಘಡದಿಂದ ಕಾರಿನ ಮುಂಭಾಗ ಸಂಪೂರ್ಣ ಹಾನಿಗೀಡಾಗಿದೆ.