ಮಂಗಳೂರು: ಲೈಂಗಿಕ ಕಿರುಕುಳ ನೀಡಿ ಅಪ್ರಾಪ್ತೆಯ ಸಾವಿಗೆ ಕಾರಣನಾದ ಪೊಲೀಸ್ ಕಾನ್ ಸ್ಟೇಬಲ್ ಗೆ ಜೀವಾವಧಿ ಶಿಕ್ಷೆ

ಮಂಗಳೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಲು ದುಷ್ಪ್ರೇರಣೆ ಮಾಡಿರುವ ಆರೋಪಿ ಪೊಲೀಸ್ ಕಾನ್ ಸ್ಟೇಬಲ್ ಗೆ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಅಗಿದ್ದ, ಬಜಪೆ ಸಿದ್ಧಾರ್ಥನಗರ ನಿವಾಸಿ ಪ್ರವೀಣ್ ಸಾಲ್ಯಾನ್ (35) ಶಿಕ್ಷೆಗೊಳಗಾದ ಅಪರಾಧಿ. 

ಪ್ರವೀಣ್ ಸಾಲ್ಯಾನ್ 2015ರ ಫೆ.16ರಂದು ಸಂತ್ರಸ್ತ ಅಪ್ರಾಪ್ತೆಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಆ ಬಳಿಕ ತಾನು ಪ್ರೀತಿಸುವುದಾಗಿ ಎಂದು ಆಕೆಯನ್ನು ಪುಸಲಾಯಿಸಿ ನಿರಂತರವಾಗಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕಿಸುತ್ತಿದ್ದ. ಇದೇ ರೀತಿ ಸಲಿಗೆ ಬೆಳೆಸಿಕೊಂಡ ಆತ ತನ್ನ ಗುಪ್ತಾಂಗದ ಫೋಟೋಗಳನ್ನು ಬಾಲಕಿಗೆ ಕಳುಹಿಸಿದ್ದಲ್ಲದೆ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ. ಬಳಿಕ ಆಕೆಯ ಮುಗ್ಧತೆಯನ್ನೇ ದಾಳವಾಗಿಸಿಕೊಂಡ ಆರೋಪಿ ಅಪ್ರಾಪ್ತ ಬಾಲಕಿ ಬಳಿ 1 ಲಕ್ಷ ರೂ. ಹಣ ಅಥವಾ ಚಿನ್ನ ನೀಡಬೇಕೆಂದು ಬೇಡಿಕೆಯಿರಿಸಿದ್ದಾನೆ. 

ಪರಿಣಾಮ ಮನನೊಂದ ಬಾಲಕಿ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಸಂತ್ರಸ್ತೆ 'ತನ್ನ ಸಾವಿಗೆ ಪ್ರವೀಣ್ ಸಾಲ್ಯಾನ್ ಕಾರಣ' ಎಂದು ಡೆತ್ ನೋಟ್ ಬರೆದಿದ್ದಳು.‌ ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣ ಬಯಲಿಗೆ ಬರುತ್ತಿದ್ದಂತೆ, ಆರೋಪಿಯನ್ನು ಅಮಾನತು ಮಾಡಲಾಗಿತ್ತು.

 ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ -1 (ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅಪರಾಧಿಗೆ ಐಪಿಸಿ 305 ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu