-->
ಅಮೇರಿಕಾದಲ್ಲಿ ಅಪಹರಣಕ್ಕೊಳಗಾದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ

ಅಮೇರಿಕಾದಲ್ಲಿ ಅಪಹರಣಕ್ಕೊಳಗಾದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಲ್ಕು ದಿನಗಳ ಹಿಂದೆ ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಮೃತದೇಹವು ಬುಧವಾರ ಹಣ್ಣಿನ ತೋಟವೊಂದರಲ್ಲಿ ಪತ್ತೆಯಾಗಿದ್ದಾರೆ. 

ಎಂಟು ತಿಂಗಳ ಮಗು ಆರೋಹಿ ಛೇರಿ, ಆಕೆ ಹೆತ್ತವರಾದ ಜಾಸ್ಲಿನ್ ಕೌರ್ (27) ಮತ್ತು ಜಸದೀಪ್ ಸಿಂಗ್ (36) ಹಾಗೂ ಮಗುವಿನ ಚಿಕ್ಕಪ್ಪ ಅಮಾನ್‌ದೀಪ್ ಸಿಂಗ್ (32) ಎಂದು ಗುರುತಿಸಲಾಗಿದೆ. ಕ್ಯಾಲಿಫೋರ್ನಿಯಾದ ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಮಧ್ಯೆ ಇರುವ ಹಣ್ಣಿನ ತೋಟದಲ್ಲಿ ಅವರ ಮೃತದೇಹಗಳು ಪತ್ತೆಯಾಗಿರುವುದಾಗಿ ಮರ್ಸಿಡ್ ಕೌಂಟಿ ಶೆರಿಫ್ ವರ್ನ್ ವಾರ್ಸ್ಕೆ ತಿಳಿಸಿದ್ದಾರೆ. 

ತೋಟದಲ್ಲಿ ಕೆಲಸ ಮಾಡುವ ನೌಕರರು ಮೃತದೇಹಗಳನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲಾ ಮೃತದೇಹಗಳು ಒಂದೇ ಕಡೆ ಬಿದ್ದಿದ್ದು ನಿಜಕ್ಕೂ ಭಯಾನಕವಾಗಿತ್ತು. ಈ ಘಟನೆಯ ಬಳಿಕ ನನಗೆ ಆಗುತ್ತಿರುವ ಕೋಪವನ್ನು ವಿವರಿಸಲು ಸಾಧ್ಯವಿಲ್ಲ. ಇದೊಂದು ಅಮಾನವೀಯ ಘಟನೆ ಎಂದು ವರ್ನ್ ವಾರ್ಸ್ಕೆ ಮಾಧ್ಯಮಗಳಿಗೆ ತಿಳಿಸಿದರು.

ಬುಧವಾರ ಸ್ಥಳೀಯ ಪೊಲೀಸರು ಕುಟುಂಬದ ಅಪಹರಣಕ್ಕೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ವೀಡಿಯೋದಲ್ಲಿ ಅಪಹರಣಕಾರರು ಜಸದೀಪ್ ಮತ್ತು ಅಮಾನ್‌ದೀಪ್ ಕೈಗಳನ್ನು ಕಟ್ಟಿಕೊಂಡು ಮರ್ಸಿಡ್ ಕೌಂಟಿಯ ಕಟ್ಟಡವೊಂದರಿಂದ ಹೊರಬರುತ್ತಿರುವುದು ವೀಡಿಯೋದಲ್ಲಿದೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಎಂಟು ತಿಂಗಳ ಮಗು ಮತ್ತು ಆಕೆಯ ತಾಯಿ ಕಟ್ಟಡದಿಂದ ಅಪಹರಣಕಾರನೊಂದಿಗೆ ಹೊರಬರುತ್ತಾರೆ. ಘಟನಾ ಸ್ಥಳದಿಂದ ಹೊರಡುವ ಮೊದಲು ಕುಟುಂಬದ ಎಲ್ಲ ನಾಲ್ಕು ಸದಸ್ಯರನ್ನು ಟ್ರಕ್‌ನಲ್ಲಿ ಕರೆದೊಯ್ಯಲಾಗಿದೆ. 

ಅಪಹರಿಸಿದ ಮಾರನೇ ದಿನ ಅಂದರೆ ಮಂಗಳವಾರ ಕುಟುಂಬದ ಸದಸ್ಯರಲ್ಲಿ ಒಬ್ಬರ ಎಟಿಎಂ ಕಾರ್ಡ್ ಅನ್ನು ಅಪಹರಣಕಾರ ಬಳಸಿರುವುದು ಪೊಲೀಸ್ ತನಿಖೆಗೆ ಮಹತ್ವದ ತಿರುವು ನೀಡಿದೆ. ಮರ್ಸೀಡ್ ಕೌಂಟಿಯ ಅಕ್ವಾಟರ್ ಏರಿಯಾದಲ್ಲಿ ಎಟಿಎಂ ಬಳಸಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ನೆರವಿನಿಂದ ಅಪಹಕಾರಣನ ಮುಖವನ್ನು ಪತ್ತೆಹಚ್ಚಲಾಗಿದೆ. ಅಪಹರಿಸುವ ಸ್ಥಳದಲ್ಲಿದ್ದ ವ್ಯಕ್ತಿಯು ವಜಾ ಎಟಿಎಂ ಕೇಂದ್ರದಲ್ಲಿದ್ದ ವ್ಯಕ್ತಿಗೂ ಸಾಮ್ಯತೆ ಇದ್ದಿದ್ದರಿಂದ ಆತನೇ ಅಪಹರಣಕಾರ ಎಂದು ಖಚಿತಪಡಿಸಿಕೊಳ್ಳಲಾಗಿದೆ‌.

ಇದಾದ ಬಳಿಕ ಕಾರ್ಯಾಚರಣೆಗೆ ಇಳಿದ ಮರ್ಸೀಡ್ ಕೌಂಟಿ ಪೊಲೀಸರು 48 ವರ್ಷದ ಮ್ಯಾನುಯೆಲ್ ಸಲ್ಲಾಡೊ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣ ನಡೆದ ಒಂದು ದಿನದ ಬೆನ್ನಲ್ಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಆಗ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ‌. ಪರಿಣಾಮ ಗಂಭೀರವಾಗಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

 ಪಂಜಾಬ್‌ನ ಹೋಶಿಯಾರ್‌ಪುರದ ಹರ್ಸಿ ಪಿಂಡ್ ಮೂಲದ ಕುಟುಂಬ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿತ್ತು . ಅಪಹರಣಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ . ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100