ಮತ್ತೊಬ್ಬಳಿಗಾಗಿ ಪತ್ನಿಯ ಮೇಲೆ ಕಾರು ಹರಿಸಿದ ಬಾಲಿವುಡ್ ನಿರ್ಮಾಪಕನ ಮೇಲೆ ದೂರು ದಾಖಲು

ಮುಂಬೈ: ಮತ್ತೊಬ್ಬಳೊಂದಿಗೆ ಇದ್ದ ವೇಳೆ ಪ್ರಶ್ನಿಸಲು ಬಂದ ಪತ್ನಿಯ ಮೇಲೆ ಕಾರು ಹರಿಸಿರುವ ಆರೋಪದ ಮೇಲೆ ಬಾಲಿವುಡ್ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ. 

ಆರೋಪಿ ಕಮಲ್ ಮಿಶ್ರಾ ಬೇರೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಇರುವುದನ್ನು ಪತ್ನಿ ನೋಡಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದ ವೇಳೆ ಕಮಲ್ ಮಿಶ್ರಾ ಪತ್ನಿಯ ಮೇಲೆಯೇ ಕಾರು ಹರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕಳೆದ ಅ.19ರಂದು ಅಂಧೇರಿ (ಪಶ್ಚಿಮ) ಉಪನಗರದ ವಸತಿ ಕಟ್ಟಡದ ಪಾರ್ಕಿಂಗ್ ಏರಿಯಾದಲ್ಲಿ ನಡೆದಿತ್ತು. ಕಾರು ಹರಿದ ಪರಿಣಾಮ ಕಮಲ್ ಮಿಶ್ರಾ ಪತ್ನಿ ಗಾಯಗೊಂಡಿದ್ದರು. 

ಇದೀಗ ನಿರ್ಮಾಪಕ ಕಮಲ್ ಮಿಶ್ರಾ ವಿರುದ್ಧ ಆತನ ಪತ್ನಿ ಅಂಬೊಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  'ತನ್ನ ಪತಿಯನ್ನು ಹುಡುಕುತ್ತಾ ಮನೆಯಿಂದ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ತನ್ನ ಕಾರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಪತಿ ಕಮಲ್ ಮಿಶ್ರಾ ಇದ್ದರು. ಇದನ್ನು ಖಚಿತಪಡಿಸಿಕೊಳ್ಳಲು ಕಾರಿನ ಬಳಿ ಹೋದಾಗ ಕಮಲ್ ಮಿಶ್ರಾ, ಅಲ್ಲಿಂದ ಪರಾರಿಯಾಗುವ ಭರದಲ್ಲಿ ತನ್ನ ಮೇಲೆ ಕಾರು ಹರಿಸಿದ್ದು, ಪರಿಣಾಮ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿರುವ ಅಂಬೋಲಿ‌ ಠಾಣಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu